ಪ್ರೇಮಪತ್ರವೇ ತಿರುಗಿಸಿತು ಪ್ರಕರಣದ ದಿಕ್ಕು; 12 ಮಂದಿ ಮೇಲಿನ ಕೇಸ್ ರದ್ದು! ಮಾಹಿತಿ ಓದಿ

ಹಂಚಿಕೊಳ್ಳಿ
WhatsApp Facebook X Telegram
Bengaluru High Court Sharavathi Pumped Storage Project Legal Issue
Bengaluru High Court Sharavathi Pumped Storage Project Legal Issue

Karnataka High Court / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಅಪ್ರಾಪ್ತೆಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದಡಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ, ಸಂತ್ರಸ್ತೆ ಸ್ವತಃ ಬರೆದಿದ್ದ ಪ್ರೇಮಪತ್ರವೇ ಪ್ರಕರಣದ ದಿಕ್ಕು ಬದಲಿಸಿದ ಪ್ರಕರಣವೊಂದು ಹೈಕೋರ್ಟ್ ವರದಿಗಾರಿಕೆಯಲ್ಲಿ ಹೊರಬಿದ್ದಿದೆ. ಈ ಘಟನೆಯಲ್ಲಿ ಪ್ರೇಮಪತ್ರದ ಸಾಕ್ಷ್ಯವನ್ನು ಪರಿಗಣಿಸಿ 12 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದಲ್ಲಿ ಯುವಕನ ಕುಟುಂಬದ 10 ಮಂದಿ ಸದಸ್ಯರು ಹಾಗೂ ಮದುವೆ ನಡೆಸಿಕೊಟ್ಟ ವ್ಯಕ್ತಿ ಸೇರಿದಂತೆ ಆರೋಪಿಗಳನ್ನು ಪೋಕ್ಸೊ ಪ್ರಕರಣದಿಂದ ಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅವುಗಳನ್ನು ವಜಾಗೊಳಿಸಿದೆ.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಪ್ರೇಮಪತ್ರಗಳು ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿವೆ. ಆ ಪತ್ರಗಳನ್ನು ತಾನೇ ಬರೆದಿದ್ದೇನೆ ಎಂಬುದನ್ನು ಯುವತಿಯೇ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಳು. ಪತ್ರಗಳಲ್ಲಿನ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ಯುವತಿ ಆ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ ಎಂದು ಪರಿಗಣಿಸಿದೆ.

ಫೋಷಕರ ನಿರ್ಬಂಧಗಳ ಕಾರಣದಿಂದ ತನ್ನ ಸ್ವಂತ ನಿರ್ಧಾರದ ಮೇಲೆಯೇ ಯುವಕನೊಂದಿಗೆ ತೆರಳಿ ಮದುವೆಯಾಗಿರುವುದಾಗಿ ಯುವತಿ ಪತ್ರಗಳಲ್ಲಿ ಬರೆದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಬಲವಂತದ ಅಪಹರಣ ಎಂದು ಪರಿಗಣಿಸಲು ಆಧಾರವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇಬ್ಬರೂ ತಮ್ಮ ಇಚ್ಛೆಯ ಮೇರೆಗೆ ಮನೆ ಬಿಟ್ಟು ತೆರಳಿರುವ ಪ್ರಕರಣವಿದು ಎಂಬ ತೀರ್ಮಾನಕ್ಕೆ ಬಂದಿದೆ.

ಅಲ್ಲದೆ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ಅನ್ವಯಿಸಲು ಘಟನೆ ನಡೆದ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು ಎಂಬುದನ್ನು ಕಾನೂನಿನ ಪ್ರಕಾರ ಸಾಬೀತುಪಡಿಸುವುದು ಮುಖ್ಯವಾಗಿತ್ತು. ಆದರೆ ಈ ವಿಚಾರದಲ್ಲಿಯೂ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ದಾಖಲೆಗಳನ್ನು ಹೈಕೋರ್ಟ್ ಒಪ್ಪಿಕೊಂಡಿಲ್ಲ. ಯುವತಿ ಅಪ್ರಾಪ್ತೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಆಕೆಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ ವಯಸ್ಸು ದೃಢೀಕರಿಸಲು ಈ ಜೆರಾಕ್ಸ್ ಪ್ರತಿಯನ್ನೇ ಆಧಾರವಾಗಿ ಪರಿಗಣಿಸಲು ನ್ಯಾಯಪೀಠ ನಿರಾಕರಿಸಿದೆ.

ಬಾಲನ್ಯಾಯ ಕಾಯ್ದೆಯ ಸೆಕ್ಷನ್ 94ರ ಅಡಿಯಲ್ಲಿ ವಯಸ್ಸು ದೃಢೀಕರಣಕ್ಕೆ ಅಗತ್ಯವಾಗಿರುವ ಪ್ರಾಥಮಿಕ ಶಾಲೆಯ ಮೂಲ ದಾಖಲಾತಿ ಅಥವಾ ಜನನ ಪ್ರಮಾಣಪತ್ರವನ್ನು ತನಿಖಾಧಿಕಾರಿ ಸಂಗ್ರಹಿಸಿರಲಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿದೆ. ಹೀಗಾಗಿ ಘಟನೆ ನಡೆದ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು ಎಂಬುದನ್ನು ಪ್ರಾಸಿಕ್ಯೂಷನ್ ಸಮರ್ಪಕ ದಾಖಲೆಗಳ ಮೂಲಕ ಸಾಬೀತುಪಡಿಸಿಲ್ಲ ಎಂದು ಪರಿಗಣಿಸಿದೆ.

ಅಂತಿಮವಾಗಿ ವಯಸ್ಸಿಗೆ ಸಂಬಂಧಿಸಿದ ಕಡ್ಡಾಯ ದಾಖಲೆಗಳ ಕೊರತೆ ಹಾಗೂ ಯುವತಿ ಸ್ವತಃ ಬರೆದಿದ್ದ ಪ್ರೇಮಪತ್ರಗಳಲ್ಲಿನ ವಿವರಗಳನ್ನು ಒಟ್ಟಾಗಿ ಪರಿಶೀಲಿಸಿದ ಹೈಕೋರ್ಟ್, ಪ್ರಕರಣದಲ್ಲಿ ಪೋಕ್ಸೊ ಕಾಯ್ದೆಯ ಅನ್ವಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ 12 ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor