ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಿದೆ. ಭದ್ರಾ ಡ್ಯಾಮ್ನಿಂದ ನಾಲೆಗಳಿಗೆ ನೀರು ಬಿಡುವ ವಿಚಾರದ ನಡುವೆ ನವೆಂಬರ್ 18ರಂದು ಲಭ್ಯವಾಗಿರುವ ಮಾಹಿತಿ ಪ್ರಕಾರ, ಎರಡು ಜಲಾಶಯಗಳ ನೀರಿನಸಂಗ್ರಹದ ವಿವರ ಹೀಗಿದೆ ಲಿಂಗನಮಕ್ಕಿ ಜಲಾಶಯದಲ್ಲಿ ಶೇ 48.37ರಷ್ಟು ನೀರು ಬಳಕೆಗೆ ಲಭ್ಯವಿದೆ. ಭದ್ರಾ ಜಲಾಶಯದಲ್ಲಿ 54.979 ಟಿಎಂಸಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ನವೆಂಬರ್ 18ರಂದು 1790.10 ಅಡಿಯಷ್ಟಿತ್ತು. ಒಟ್ಟು ಹೊರಹರಿವು 3351.80 ಕ್ಯೂಸೆಕ್‌ನಷ್ಟಿದೆ. ಲಿಂಗನಮಕ್ಕಿ ಜಲಾಶಯದ ಒಟ್ಟು ಬಳಕೆಗೆ ಲಭ್ಯವಿರುವ ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿಯಾಗಿದ್ದು, ಪ್ರಸ್ತುತ 73.35 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಶೇ 48.37ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1812.05 ಅಡಿಯಿದ್ದು, 129.26 ಟಿಎಂಸಿ ನೀರು ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷ ಶೇ 85.27ರಷ್ಟು ನೀರಿನ ಸಂಗ್ರಹವಿತ್ತು.
ಭದ್ರಾ ಜಲಾಶಯ
ಭದ್ರಾ ಜಲಾಶಯದ ನೀರಿನ ಮಟ್ಟ ನವೆಂಬರ್ 18ರಂದು 171 ಅಡಿ 11¼ ಇಂಚಿನಷ್ಟಿದೆ. ಜಲಾಶಯದ ಪೂರ್ಣ ಜಲಮಟ್ಟ 186 ಅಡಿ, ಒಟ್ಟು ನೀರು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ, ಪ್ರಸ್ತುತ 54.979 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಕೇವಲ 42 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಒಟ್ಟು 1894 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ 183 ಅಡಿ 1 ಇಂಚಷ್ಟಿತ್ತು, 67.906 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭದ್ರಾ ಜಲಾಶಯದಲ್ಲಿ 12.927 ಟಿಎಂಸಿ ನೀರು ಕಡಿಮೆಯಿದ್ದು, ನೀರಿನ ಮಟ್ಟ 11 ಅಡಿ 1¾ ಇಂಚಿನಷ್ಟು ಇಳಿಕೆಯಾಗಿದೆ.
