ಸುದ್ದಿಯ ಸ್ಥಳ: Sringeri, Chikkamagaluru, Karnataka
ಮಲೆನಾಡು ಟುಡೆ ಸುದ್ದಿ / ಬಾಳೆಹೊನ್ನೂರು / ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ನವೆಂಬರ್ 24ರಂದು ಸಂಜೆ ಕಾರ್ತಿಕ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ನಡೆಯಲಿದೆ. ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ತಿಕ ದೀಪೋತ್ಸವವನ್ನು ಶೃಂಗೇರಿ ಶಾಸಕ ರಾಜೇಗೌಡ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ನಾಡಿನ ಶಿವಾಚಾರ್ಯರ ಬಳಗ ಸಹಯೋಗ ನೀಡಲಿದೆ. ದೀಪೋತ್ಸವದ ಅಂಗವಾಗಿ ಪೀಠದ ವಿವಿಧ ದೇವಾಲಯಗಳು ಹಾಗೂ ಜಗದ್ಗುರುಗಳ ಗದ್ದುಗೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ನವೆಂಬರ್ 24ರಂದು ಬೆಳಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ವಿಜಯ ವಿನಾಯಕ ಹಾಗೂ ಶಕ್ತಿಮಾತೆಯರಾದ ಶ್ರೀ ಪಾರ್ವತಿ, ಶ್ರೀ ಚೌಡೇಶ್ವರಿ ಮತ್ತು ಶ್ರೀ ಭದ್ರಕಾಳಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಇದರೊಂದಿಗೆ ಲಿಂಗೈಕ್ಯ ಶ್ರೀ ಜಗದ್ಗುರುಗಳ ಗದ್ದುಗೆಗಳಲ್ಲಿಯೂ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿವೆ.
ಸಂಜೆ ಕಾರ್ತಿಕ ದೀಪೋತ್ಸವ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಜರುಗಲಿದೆ.
ದೀಪೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಲಲಿತಾದೇವಿ ಶಿವಪುತ್ರಯ್ಯ ಸುರಗೀಮಠ ಮತ್ತು ಅವರ ಮಕ್ಕಳು ದೀಪಾರಾಧನೆ ಸೇವೆ ಸಲ್ಲಿಸಲಿದ್ದಾರೆ. ಹುಬ್ಬಳ್ಳಿಯ ಗುತ್ತಿಗೆದಾರ ವೀರೇಶ ಪಾಟೀಲ ಹಾಗೂ ಬಾಳೆಹೊನ್ನೂರು, ಬಾಸಾಪುರ, ಕಡವಂತಿ ಮತ್ತು ಆಲ್ಲೂರು ಭಾಗದ ಸದ್ಭಕ್ತರು ವಿದ್ಯುತ್ ದೀಪಾಲಂಕಾರ ಸೇವೆಯನ್ನು ಕೈಗೊಳ್ಳಲಿದ್ದಾರೆ.
ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ ನಾಡಿನ ವಿವಿಧ ಭಾಗಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಂಭಾಪುರಿ ಪೀಠದ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
