ಸೊರಬ: ಕುಟುಂಬ ಕಲಹದಿಂದ ಬೇಸತ್ತು ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಸಕಾಲದಲ್ಲಿ ರಕ್ಷಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ ನೆರವೇರಿದೆ.
Soraba ಘಟನೆ ವಿವರ
ಪತಿ-ಪತ್ನಿ ನಡುವೆ ಉಂಟಾದ ಕೌಟುಂಬಿಕ ಜಗಳದಿಂದ ಮನನೊಂದ ಮಹಿಳೆಯೊಬ್ಬರು, ತನ್ನ ಸಣ್ಣ ಮಗಳೊಂದಿಗೆ ಚಂದ್ರಗುತ್ತಿ ಸಮೀಪದ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ನದಿಯ ದಂಡೆಯ ಬಳಿ ತಾಯಿಯು ಮಗಳನ್ನು ನೀರಿಗೆ ತಳ್ಳಲು ಯತ್ನಿಸಿದಾಗ, ಆ ಮಗು ಜೋರಾಗಿ ಚೀರಾಡಿದೆ. ಈ ಆಕ್ರಂದನ ಕೇಳಿದ ತಕ್ಷಣವೇ ಸ್ಥಳೀಯರು ಕಾರ್ಯಾಚರಣೆಗೆ ಇಳಿದಿದ್ದಾರೆ.
ನದಿಯಲ್ಲಿ ಮೀನು ಹಿಡಿಯುತ್ತಿದ್ದ ಚಿಕ್ಕಮಾಕೊಪ್ಪ ಗ್ರಾಮದ ಸಾಹಿಲ್, ಸೋನು ಹಾಗೂ ಯಾಸಿನ್ ಎಂಬ ಯುವಕರು ತಕ್ಷಣವೇ ಸಮಯಪ್ರಜ್ಞೆ ಮೆರೆದು ನದಿಗೆ ಧುಮುಕಿ, ಅಪಾಯದಲ್ಲಿದ್ದ ತಾಯಿ ಮತ್ತು ಮಗಳಿಬ್ಬರನ್ನೂ ಸುರಕ್ಷಿತವಾಗಿ ದಂಡೆಗೆ ಕರೆತಂದು ಜೀವ ಉಳಿಸಿದ್ದಾರೆ
ಯುವಕರ ಈ ಸಮಯಪ್ರಜ್ಞೆಯ ಕಾರ್ಯವನ್ನು ಮೆಚ್ಚಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಸೊರಬ ಪೊಲೀಸ್ ಠಾಣೆಯ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.
