ಶಿಕಾರಿಪುರ : ಬಜರಂಗ್​​ ದಳದ ಕಾರ್ಯಕರ್ತರ ಮೇಲೆ ಹಲ್ಲೆ : ಆ ರಾತ್ರಿ ನಡೆದಿದ್ದೇನು, ಚೇಸಿಂಗ್​ ಲಾಂಗ್​ನಿಂದ ಅಟ್ಯಾಕ್​​, ಪರಿಸ್ಥಿತಿ ಬಗ್ಗೆ ರಾಜೇಶ್​​ಗೌಡ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Shikaripura Attack VHP Calls Bandh on Aug 19
Shikaripura Attack VHP Calls Bandh on Aug 19

ಶಿಕಾರಿಪುರ: ಶಿಕಾರಿಪುರದಲ್ಲಿ ಬೆಳಗ್ಗಿನ ಜಾವ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ, ಅವುಗಳನ್ನು ರಕ್ಷಿಸಲು ತೆರಳಿದ್ದ ಬಜರಂಗದಳದ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಆಗಸ್ಟ್ 19 ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಿದ್ದಾರೆ. ಇನ್ನು ಈ ಭೀಕರ ದಾಳಿ ಹಾಗೂ ಚೇಸಿಂಗ್ ಘಟನೆಯ ಸತ್ಯಾಸತ್ಯತೆಯನ್ನು ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ರಾಜೇಶ್ ಗೌಡ ಅವರು ಸುದ್ಧಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ. 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ನ 65ನೇ ಸಂಸ್ಥಾಪನಾ ದಿನಾಚರಣೆ: ಯುವಶಕ್ತಿಗೆ ನಾಯಕರ ಕರೆ!

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ಗೌಡ, ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ತಡರಾತ್ರಿ ಬಂದ ಕಳ್ಳರ ಗುಂಪೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದೆ. ಜಾನುವಾರುಗಳ ಸದ್ದು ಕೇಳಿ ಎಚ್ಚೆತ್ತ ಮನೆಯವರು ತಕ್ಷಣವೇ ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಆರೋಪಿಗಳ ವಾಹನವನ್ನು ಹಿಂಬಾಲಿಸಿದ್ದಾರೆ. ನಾವು ತೆರಳುವ ಮುನ್ನವೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು.  ನೈತಿಕ ಪೊಲೀಸ್​ ಗಿರಿ ಆಗುತ್ತದೆ ಎಂಬ ಕಾರಣಕ್ಕೆ ನಾವು ಆ ವಾಹನವನ್ನು ಅಡ್ಡಹಾಕುವುದಾಗಲಿ ಅಥವಾ ಪ್ರಶ್ನಿಸುವುದಾಗಲಿ ಮಾಡಲಿಲ್ಲ,  ಎಂದು ವಿವರಣೆ ನೀಡಿದರು. 

ಗೋವು ಸಾಗಣೆ ಮಾಡುತ್ತಿದ್ದ ವಾಹನವು ಅತಿಯಾದ ವೇಗದಿಂದ ಹೋಗುತಿತ್ತು. ರಸ್ತೆ ಬದಿಯಲ್ಲಿದ್ದ ಕರು, ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ಹಾಗೂ ನಿಲ್ಲಿಸಿದ್ದ ಆಲ್ಟೋ 800 ಕಾರಿಗೂ ಡಿಕ್ಕಿ ಹೊಡೆದುಕೊಂಡು ಅತಿ ವೇಗವಾಗಿ ಸಾಗಿತ್ತು. ಇದನ್ನು ನಮ್ಮ ವಾಹನ ಹಿಂಬಾಲಿಸುತ್ತಾ ಗಮನಿಸುತ್ತಿತ್ತು. ಶಿಕಾರಿಪುರಕ್ಕೆ ಇನ್ನು 10 ಕಿಲೋಮೀಟರ್ ಬಾಕಿ ಇರುವಾಗ, ವಾಹನದಲ್ಲಿದ್ದ ದುಷ್ಕರ್ಮಿಗಳು ತಮ್ಮ ಇತರ ಸಹಚರರಿಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಎರಡೂ ಬದಿಯಿಂದ ಲಾಂಗ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಕಾರ್ಯಕರ್ತರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆಸಿದ್ದಾರೆ. ಈ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ, ಎಂದು ಅವರು ವಿವರಿಸಿದರು. 

ಕಾರಿನಿಂದ ಕಾರ್ಯಕರ್ತರು ಕೆಳಗಿಳಿಯುತ್ತಿದ್ದಂತೆ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಬಜರಂಗದಳದ ಕಾರ್ಯಕರ್ತ ಚಂದ್ರಶೇಖರ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಯಲ್ಲಿದ್ದ ಕಿರಣ್ ಹಾಗೂ ಅಭಿಲಾಷ್ ಅವರಿಗೂ ಗಾಯಗಳಾಗಿವೆ. ಈ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಗೋ ಕಳ್ಳರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ರಾಜೇಶ್ ಗೌಡ ಆಗ್ರಹಿಸಿದ್ದಾರೆ. ಶಿಕಾರಿಪುರದ ಸಾಲೂರು ಗ್ರಾಮದ ಬಳಿ ಅಕ್ರಮ ಗೋವು ಸಾಗಾಟ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಸಾಗರ ಘಟಕದ ಕಾರ್ಯಕರ್ತರ ಮೇಲೆ ನಡೆಸಿದ ಕೊಲೆ ಯತ್ನವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. 

Shikaripura Attack ಆಗಸ್ಟ್​ 19 ರಂದು ಶಿಕಾರಿ ಪುರ ಬಂದ್​ಗೆ ಕರೆ

ಇದೇ ವೇಳೆ ವಿಶ್ವ ಹಿಂದೂ ಪರಿಷತ್‌ ಸಾಗರ ಘಟಕದ ಅಧ್ಯಕ್ಷೆ ಪ್ರತಿಮಾ ಮಾತನಾಡಿ, ಒಬ್ಬ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದರೆ ಯಾರೂ ಹೆದರುವುದಿಲ್ಲ, ಅಂತಹ ಹತ್ತು ಜನರು ಹುಟ್ಟಿಕೊಳ್ಳುತ್ತಾರೆ. ಹಿಂದೂ ಸಮಾಜ ಯಾವತ್ತೂ ಬಂಜೆಯಲ್ಲ. ಗೋ ಕಳ್ಳರ ಅಟ್ಟಹಾಸ ಮಿತಿ ಮೀರಿದ್ದು, ಪೊಲೀಸ್ ಇಲಾಖೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಆಗಸ್ಟ್ 19 ರಂದು ಸ್ವಯಂಪ್ರೇರಿತ ಶಿಕಾರಿಪುರ ಬಂದ್‌ಗೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor