ಶಿವಮೊಗ್ಗ : ಸಕ್ರೆಬೈಲ್​ನ ಶೌರ್ಯ ಆನೆ ಸಾವಿಗೆ ಕಾರಣವೇನು, ಅಧಿಕಾರಿಗಳು ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
ಸಕ್ರೆಬೈಲು ಆನೆ ಶೌರ್ಯ ಸಾವಿಗೆ ಕಾರಣ ತಿಳಿಸಿದ ಅಧಿಕಾರಿಗಳು
ಸಕ್ರೆಬೈಲು ಆನೆ ಶೌರ್ಯ ಸಾವಿಗೆ ಕಾರಣ ತಿಳಿಸಿದ ಅಧಿಕಾರಿಗಳು

ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ: ಸಕ್ರೆಬೈಲು ಆನೆ ಶಿಬಿರದಲ್ಲಿದ್ದ ಶೌರ್ಯ ಹೆಸರಿನ ಆನೆ ಇಂದು ಬೆಳಿಗ್ಗೆ ಮೃತಪಟ್ಟಿದೆ. ಶೌರ್ಯ ಆನೆ ಸಣ್ಣ ಪುಟ್ಟ ಗಾಯಗಳಿಂದ ಬಳಲುತ್ತಿದ್ದು,  ಚಿಕಿತ್ಸೆಗೆ ಒಳಗಾಗಿತ್ತು, ಇಂದು ಏಕಾ ಏಕಿ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಡಿ ಸಿ ಎಫ್ ಪ್ರಸನ್ನ ಪಟಗಾರ್, ಈ ಹಿಂದೆ ಕೊಪ್ಪ ವಿಭಾಗದ ಬಾಳೆಹೊನ್ನೂರು ಭಾಗದಲ್ಲಿ ಮಾನವ-ಆನೆ ಸಂಘರ್ಷದ ವೇಳೆ ಇಬ್ಬರನ್ನು ಸಾಯಿಸಿದ್ದ ಶೌರ್ಯ ಆನೆಯನ್ನು ಸೆರೆಹಿಡಿದು ಸಕ್ರೆಬೈಲು ಶಿಬಿರದ ಕ್ರಾಲ್‌ನಲ್ಲಿಡಲಾಗಿತ್ತು. ಆ ಸಂದರ್ಭದಲ್ಲಿ ಆನೆಯ ಹಣೆ ಹಾಗೂ ಕಾಲಿನ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ಕ್ರಾಲ್‌ನಿಂದ ಹೊರಬರಲು ಅತ್ಯಂತ ಉದ್ರೇಕದಿಂದ ಯತ್ನಿಸುತ್ತಿದ್ದ ಆನೆ, ಕ್ರಾಲ್‌ಗೆ ಹೊಡೆದುಕೊಂಡು ಗಾಯಗಳನ್ನು ಮಾಡಿಕೊಳ್ಳುತ್ತಿತ್ತು.   

ನಂತರ ಆನೆಯನ್ನು ಕ್ರಾಲ್‌ನಿಂದ ಹೊರಗೆ ತಂದಾಗ ಒಳಗಾಯಗಳಿರುವುದು ಕಂಡುಬಂದಿದ್ದು, ನಿರಂತರವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿತ್ತು. ಗಾಯಗಳು ಗುಣಮುಖವಾಗುತ್ತಿದ್ದ ಹಂತದಲ್ಲಿ ತರಬೇತಿ ವೇಳೆ ಮತ್ತೆ ಕೆಲವೊಂದು ಗಾಯಗಳಾಗಿದ್ದವು. ನಿನ್ನೆ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಒಳಭಾಗದ ಗಾಯದಲ್ಲಿದ್ದ ಡೆಡ್ ಟಿಶ್ಯೂಸ್ ತೆಗೆದು ಚಿಕಿತ್ಸೆ ನೀಡಲಾಗಿತ್ತು. ಆದರೆ, ಆನೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದೆ.   ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಗಾಯದಲ್ಲಿ ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗಿ ಟಾಕ್ಸಿಮಿಯಾ ಉಂಟಾಗಿದ್ದು, ಇದರಿಂದ ಸೆಪ್ಟಿಕ್ ಶಾಕ್ ಹಾಗೂ ಮೂಳೆಯ ಭಾಗಕ್ಕೆ ಬಿದ್ದ ಒತ್ತಡದಿಂದಾಗಿ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. 

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.   ಸುಮಾರು 32 ವರ್ಷ ಪ್ರಾಯದ ಈ ಆನೆಗೆ ಶಿಬಿರದಲ್ಲಿದ್ದ ಲಭ್ಯ ವೈದ್ಯರಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. 15 ದಿನಗಳ ಹಿಂದೆ ಆಗಮಿಸಿದ್ದ ವಿಶೇಷ ವೈದ್ಯರ ತಂಡವೂ ಸಹ ಆನೆಯು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗುತ್ತಿದೆ ಎಂದು ತಿಳಿಸಿ, ಇದೇ ಚಿಕಿತ್ಸೆಯನ್ನು ಮುಂದುವರಿಸಲು ಸಲಹೆ ನೀಡಿದ್ದರು ಎಂದು ಡಿ ಸಿ ಎಫ್ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor