80ನೇ ಸ್ವಾತಂತ್ರ್ಯೋತ್ಸವ: ಈಸೂರಿನ ಸ್ವಾಭಿಮಾನದ ಹಾದಿಯಲ್ಲಿ ನಾಡಿನ ವಿಕಾಸ – ಸಚಿವ ಮಧು ಬಂಗಾರಪ್ಪ ಕರೆ

ಹಂಚಿಕೊಳ್ಳಿ
WhatsApp Facebook X Telegram
Madhu Bangarappa Unveils Growth Plan
Madhu Bangarappa Unveils Growth Plan

Madhu Bangarappa ಶಿವಮೊಗ್ಗ, : ಸ್ವಾತಂತ್ರ್ಯ ಎಂದರೆ ಕೇವಲ ರಾಷ್ಟ್ರಧ್ವಜವನ್ನು ಹಾರಿಸುವುದಲ್ಲ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಗೌರವದಿಂದ ಬದುಕುವ ಸುಖಕರ ವಾತಾವರಣವನ್ನು ನಿರ್ಮಿಸುವುದಾಗಿದೆ. ಹಸಿವು, ಬಡತನ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತುವುದೇ ನಾವು ದೇಶಕ್ಕೆ ಸಲ್ಲಿಸುವ ನಿಜವಾದ ಗೌರವ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಎಸ್. ಮಧು ಬಂಗಾರಪ್ಪ ಹೇಳಿದರು . ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಗೆ ಶುಭಾಶಯ ಕೋರಿ ಅವರು ಪ್ರಧಾನ ಸಂದೇಶ ನೀಡಿದರು. 

ಶಿವಮೊಗ್ಗ ಜಿಲ್ಲೆಯು ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಪೂರ್ವ ಸ್ಥಾನ ಪಡೆದಿದೆ. ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರಂತಹ ಧುರೀಣರು ಹಾಗೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ದಿಟ್ಟ ಹೋರಾಟ ನಡೆಸಿ ಇತಿಹಾಸ ಬರೆದ ಈಸೂರಿನ ಅಮರ ಹೋರಾಟಗಾರರ ತ್ಯಾಗ-ಬಲಿದಾನಗಳು ನಮಗೆ ಸದಾ ಪ್ರೇರಣೆಯಾಗಿವೆ. ಯುವಶಕ್ತಿಯನ್ನು ನಾಡಿನ ಪುನರ್ನಿರ್ಮಾಣದಲ್ಲಿ ಕ್ರಿಯಾಶೀಲವಾಗಿ ತೊಡಗಿಸಲು ರಾಜ್ಯಾದ್ಯಂತ 10,000 ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ಸ್ಥಾಪಿಸಲು ಚೌಕಟ್ಟು ಸಿದ್ಧಪಡಿಸಲಾಗಿದೆ. ಈ ಪ್ರತಿಯೊಂದು ಸಂಘಕ್ಕೆ ಸರ್ಕಾರದಿಂದ ವಾರ್ಷಿಕವಾಗಿ ₹10 ಲಕ್ಷ ಅನುದಾನ ಸಿಗಲಿದ್ದು, ಉದ್ಯೋಗ ಸೃಷ್ಟಿ, ಶಿಕ್ಷಣ ಹಾಗೂ ಸಾಮಾಜಿಕ ಪ್ರಗತಿಗೆ ಯುವಜನತೆ ಸಕ್ರಿಯವಾಗಿ ಕೊಡುಗೆ ನೀಡಲು ಇದು ನೆರವಾಗಲಿದೆ. 

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ತಲುಪುತ್ತಿವೆ. ಗೃಹಲಕ್ಷ್ಮಿ ಯೋಜನೆಯಡಿ 3.78 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳ ಖಾತೆಗೆ ₹2,363 ಕೋಜಮೆಯಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ 3.76 ಲಕ್ಷ ಪಡಿತರ ಚೀಟಿದಾರರಿಗೆ 2.45 ಲಕ್ಷ ಕ್ವಿಂಟಾಲ್ ಉಚಿತ ಅಕ್ಕಿ ವಿತರಿಸಲಾಗಿದೆ. ಶಕ್ತಿ ಯೋಜನೆಯಡಿ 8.25 ಕೋಟಿ ಉಚಿತ ಪ್ರಯಾಣದ ಸೌಲಭ್ಯವನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 4.77 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿದ್ದು, ಇದಕ್ಕಾಗಿ ₹752 ಕೋಟಿ ಸಬ್ಸಿಡಿ ನೀಡಲಾಗಿದೆ. ಯುವನಿಧಿ ಯೋಜನೆಯಡಿ 12,969 ಪದವೀಧರ ಹಾಗೂ ಡಿಪ್ಲೊಮಾ ಯುವಕ-ಯುವತಿಯರಿಗೆ ₹36 ಕೋಟಿ ನೆರವು ತಲುಪಿಸಲಾಗಿದೆ. 

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಾಗುತ್ತಿದ್ದು, ರಾಜ್ಯದಲ್ಲಿ ಈಗಾಗಲೇ 1,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 1,000 ಕೆಪಿಎಸ್ ಶಾಲೆಗಳನ್ನು ತೆರೆಯುವ ಉದ್ದೇಶವಿದೆ. ಇದರ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗದಲ್ಲೇ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 11 ಕೆಪಿಎಸ್ ಶಾಲೆಗಳು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ 59 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಜಿಲ್ಲೆಯ 222 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಆರಂಭವಾಗಿವೆ.

ಶಾಲೆಗಳ ಮೂಲಸೌಕರ್ಯ ಬಲಪಡಿಸಲು ₹319 ಲಕ್ಷ ಕೊಠಡಿ ದುರಸ್ತಿಗೆ ಹಾಗೂ ₹1,180 ಲಕ್ಷ ನೂತನ ಕೊಠಡಿಗಳ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ರಾಜ್ಯದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ (98.08%) ಹಾಗೂ ಪಿಯುಸಿಯಲ್ಲಿ (92.25%) ದಾಖಲೆಯ ಫಲಿತಾಂಶ ಬಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಶೇ. 96.5 ರಷ್ಟು ಉತ್ತೀರ್ಣತೆಯೊಂದಿಗೆ ಶೇ. 14 ರಷ್ಟು ಪ್ರಗತಿ ಕಾಣಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೆಯೇ ಮೆಟ್ರಿಕ್ ನಂತರದ ಹೆಣ್ಣುಮಕ್ಕಳ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ₹24 ಕೋಟಿ ಮೀಸಲಿಡಲಾಗಿದೆ. 

ಉದ್ಯೋಗಾಕಾಂಕ್ಷಿಗಳಿಗಾಗಿ ರಾಜ್ಯ ಸರ್ಕಾರವು 72,000 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪ್ರಥಮ ಹಂತವಾಗಿ 15,000 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಯುವ ಉದ್ಯೋಗ ಸೇತು’ ಡಿಜಿಟಲ್ ವೇದಿಕೆಯನ್ನು ಆರಂಭಿಸಲಾಗಿದೆ. ಸಾರ್ವಜನಿಕರ ದೂರುಗಳನ್ನು ಸ್ಥಳದಲ್ಲೇ ಶೀಘ್ರವಾಗಿ ವಿಲೇವಾರಿ ಮಾಡಲು ‘ಪ್ರಜಾಸೇವೆ’ ಎಂಬ ನೂತನ ಇಲಾಖೆಯನ್ನು ಸ್ಥಾಪಿಸಲಾಗಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ‘ಪ್ರಜಾಸೇವಾ ಅಭಿಯಾನ’ದ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತಿದೆ.

ಗ್ರಾಮೀಣ ಭಾಗದ ರಸ್ತೆ ಜಾಲವನ್ನು ಸುಧಾರಿಸಲು ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ 250 ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆಗಾಗಿ 1,005 ಕೋಟಿ ವೆಚ್ಚದಲ್ಲಿ ಬೃಹತ್ ಯೋಜನೆಗಳು ಸಾಗುತ್ತಿದ್ದು, ಸಾಗರ ತಾಲೂಕಿನ ಆನಂದಪುರ ಕುಡಿಯುವ ನೀರಿನ ಯೋಜನೆ final ಹಂತದಲ್ಲಿದೆ. ಜಿಲ್ಲೆಯ ಮೆಗಾ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ವಿಭಾಗ ಹಾಗೂ ತೀವ್ರ ನಿಗಾ ಘಟಕಗಳನ್ನು (ICU) ಅತ್ಯಾಧುನಿಕ ಮಟ್ಟಕ್ಕೆ ಏರಿಸುವ ಕೆಲಸಗಳು ಪ್ರಗತಿಯಲ್ಲಿವೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಶರಾವತಿ ಸಂತ್ರಸ್ತರ ಹಾಗೂ ಬಾಗರ್ ಹುಕುಂ ರೈತರ ಭೂಮಿ ಹಕ್ಕುಗಳ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಲಿದೆ. 

ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಬಡವರು, ರೈತರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ನನ್ನ ಹೆಮ್ಮೆ ಮತ್ತು ಜವಾಬ್ದಾರಿಯಾಗಿದೆ. 1990ರಲ್ಲಿ ಶಿವಮೊಗ್ಗದಲ್ಲಿ ಕೇವಲ 12,000 ಹೆಕ್ಟೇರ್ ಇದ್ದ ಅಡಿಕೆ ಬೆಳೆಯು ಇಂದು 1.4 ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗಲು ಅವರ ಕ್ರಾಂತಿಕಾರಿ ಕೃಷಿ ನೀತಿಗಳೇ ಕಾರಣ. ಕುವೆಂಪು ಅವರ ‘ವಿಶ್ವಮಾನವ’ ಸಂದೇಶ ಹಾಗೂ ಈಸೂರಿನ ಸ್ವಾವಲಂಬನೆಯ ಸ್ಪೂರ್ತಿಯೊಂದಿಗೆ ನಾವೆಲ್ಲರೂ ಒಟ್ಟಾಗಿ ಮಲೆನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಸಚಿವ ಮಧು ಬಂಗಾರಪ್ಪ ಕರೆ ನೀಡಿದರು. 

ಧ್ವಜಾರೋಹಣದ ನಂತರ ನೆರವೇರಿದ ಆಕರ್ಷಕ ಪಥಸಂಚಲನದಲ್ಲಿ 29 ಕವಾಯಿತು ತುಕಡಿಗಳು ಭಾಗವಹಿಸಿ ಗೌರವ ಸಲ್ಯೂಟ್ ಸ್ವೀಕರಿಸಿದವು. ಡಿಎಆರ್ ಆರ್  ಐ ಯುವರಾಜ್ ಅವರು ಕನ್ನಡದಲ್ಲೇ ಶಿಸ್ತಿನ ಆಜ್ಞೆಗಳನ್ನು ನೀಡಿ ಕವಾಯಿತು ಮುನ್ನಡೆಸಿದರು. ವಿವಿಧ ಶಾಲಾ-ಕಾಲೇಜುಗಳ ಸುಮಾರು 18,000 ವಿದ್ಯಾರ್ಥಿಗಳು ಭಾಗವಹಿಸಿ ನೀಡಿದ ಕಣ್ಣುಮನ ಸೆಳೆಯುವ ದೇಶಭಕ್ತಿ ನೃತ್ಯ ರೂಪಕಗಳು ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಯಿತು. 

Madhu Bangarappa ಪಥಸಂಚಲನ ಸ್ಪರ್ಧೆಯಲ್ಲಿ ಕಸ್ತೂರಿಬಾ ಬಾಲಕಿಯರ ಪ್ರೌಢಶಾಲೆಯ ಭಾರತ ಸೇವಾದಳ ಪ್ರಥಮ, ಜಾವಳ್ಳಿಯ ಜ್ಞಾನದೀಪ ಪ್ರೌಢಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೃತೀಯ ಸ್ಥಾನ ಗಳಿಸಿದವು. ಸಾಂಸ್ಕೃತಿಕ ನೃತ್ಯ ವಿಭಾಗದಲ್ಲಿ ಕಿರಣ್ ಕೇಂದ್ರೀಯ ವಿದ್ಯಾಲಯ ಪ್ರಥಮ, ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ಮೌಂಟ್ ಇನ್ನೋವೇಟಿವ್ ಶಾಲೆ ತೃತೀಯ ಬಹುಮಾನ ಪಡೆದುಕೊಂಡವು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಒ ಎನ್. ಹೇಮಂತ್, ಎಸ್ಪಿ ನಿಖಿಲ್ ಬಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor