ಹಲೋ ಮಧು, ಖುಷಿಯಾಯ್ತು! ಸಚಿವರಿಗೆ ಕರೆ ಮಾಡಿದ ಕಾಗೋಡು ತಿಮ್ಮಪ್ಪ! ಬೇಳೂರು ಗೋಪಾಲಕೃಷ್ಣರಿಗೂ ಮಾತನಾಡಿದ್ರು!

ಹಂಚಿಕೊಳ್ಳಿ
WhatsApp Facebook X Telegram
Kagodu Thimmappa 95th Birthday
Kagodu Thimmappa 95th Birthday

Kagodu Thimmappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ, ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರು ಇಬ್ಬರು ಪ್ರಮುಖ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ವಿಡಿಯೋವೊಂದು ಇದೀಗ ಹೊರಬಿದ್ದಿದೆ.

ನೂತನ ಸಚಿವರಾಗಿರುವ ಮಧು ಬಂಗಾರಪ್ಪ ಹಾಗೂ ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಕಾಗೋಡು ತಿಮ್ಮಪ್ಪ ಅವರು ಪ್ರತ್ಯೇಕವಾಗಿ ಕರೆ ಮಾಡಿ ತಮ್ಮ ಹಿರಿಯಣ್ಣನ ನಿಲುವನ್ನು ಪ್ರದರ್ಶಿಸಿದ್ದಾರೆ. ಹಿರಿಯ ನಾಯಕರ ಈ ದೂರವಾಣಿ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೊದಲಿಗೆ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿದ ಕಾಗೋಡು ತಿಮ್ಮಪ್ಪ ಅವರು, ಮಧು ಕಂಗ್ರಾಜುಲೇಷನ್ಸ್ ಎಂದು ಹೇಳುವ ಮೂಲಕ ತಮ್ಮ ಆತ್ಮೀಯ ಅಭಿನಂದನೆಗಳನ್ನು ತಿಳಿಸಿದರು. ಇದೇ ವೇಳೆ ಮಧು ಬಂಗಾರಪ್ಪ ಅವರಿಗೆ ಕಟ್ಟುನಿಟ್ಟಿನ ಹಾಗೂ ಪ್ರೀತಿಯ ಕಿವಿಮಾತು ಹೇಳಿದ ಅವರು, ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಮಗ, ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರ ವಿಶ್ವಾಸ ಗಳಿಸಬೇಕು. ನಿನಗೆ ಒಳ್ಳೆಯ ಹೆಸರು ಬರಬೇಕು ಮತ್ತು ನಿನ್ನಿಂದ ಜಿಲ್ಲೆಗೂ ಹಾಗೂ ತಾಲೂಕಿಗೂ ಒಳ್ಳೆಯ ಹೆಸರು ಬರಬೇಕು ಎಂದು ಆಶೀರ್ವದಿಸಿದ್ದಾರೆ. ಜನರ ನಡುವೆ ಇದ್ದು ಅಭಿವೃದ್ಧಿ ಕೆಲಸಗಳ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಅವರು ಇದೇ ವೇಳೆ ಸೂಚನೆ ನೀಡಿದರು.

ಬಳಿಕ ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಕಾಗೋಡು ತಿಮ್ಮಪ್ಪ ಅವರು ದೂರವಾಣಿ ಕರೆ ಮಾಡಿದರು. ಶಾಸಕರನ್ನು ಆರಾಮಾಗಿದ್ದೀರಾ ಎಂದು ಕುಶಲೋಪರಿ ವಿಚಾರಿಸಿದ ಅವರು, ಸಚಿವ ಸ್ಥಾನದ ವಿಚಾರದಲ್ಲಿ ಏನಾಯ್ತು ಹೀಗೆ ಎಂದು ತಾವೇ ಖುದ್ದು ಪ್ರಶ್ನಿಸಿದರು. ಅಲ್ಲದೆ, ಕೊನೆಯ ಘಳಿಗೆಯಲ್ಲಿ ರಾಹುಲ್ ಗಾಂಧಿ ಅವರು ಪಟ್ಟಿಯಲ್ಲಿ ಬದಲಾವಣೆ ಮಾಡಿದ್ದಾರೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸ್ವಲ್ಪ ನಿಧಾನವಾಗಿರಿ, ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ, ಮುಂದೆ ಅವಕಾಶ ಸಿಕ್ಕಾಗ ಖಂಡಿತ ಬರುತ್ತದೆ, ಇದು ಒಂದೇ ಸರ್ಕಾರವಲ್ಲ ಎಂದು ಹೇಳುವ ಮೂಲಕ ಬೇಳೂರು ಗೋಪಾಲಕೃಷ್ಣ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಅಲ್ಲದೆ ಹುಷಾರಾಗಿರಿ ಹಾಗೂ ಸಾರಿ ಎಂದು ಹೇಳುವ ಮೂಲಕ ಅಸಮಾಧಾನಿತ ಶಾಸಕರಿಗೆ ಧೈರ್ಯ ತುಂಬುವ ಕೆಲಸವನ್ನು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor