JP STORY

ಶಿವಮೊಗ್ಗದಲ್ಲೊಂದು ನಿಗೂಢ ಸೂಟ್​ಕೇಸ್​ ಶವದ ಕೇಸ್​, ನಾಲ್ವರು ಅರೆಸ್ಟ್! ಪೂರ್ತಿ ಕಥೆ ಜೆಪಿ ಬರೆಯುತ್ತಾರೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

shivamogga suitcase / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಆತ್ಮಹತ್ಯೆ ಮಾಡಿಕೊಂಡ ಯುವತಿಯ ಮಾಹಿತಿಯನ್ನು ಪಿಜಿಯ ಮಾಲೀಕರು ಪೊಲೀಸರಿಗೆ ನೀಡಿದ್ದರೂ ಸಹ ಈ ಘಟನೆ ಅಷ್ಟೊಂದು ಕಾವು ಪಡೆಯುತ್ತಿರಲಿಲ್ಲ. ಆದರೆ ಯುವತಿಯ ಶವವನ್ನ ಜೋಗದ ಸಮೀಪ ಎಸೆದು ಪೊಲೀಸರಿಗೆ ತಗಲಾಕೊಂಡ ಅಪರೂಪದ ಮಿಸ್ಸಿಂಗ್ ಕೇಸ್ ನ ಮಿಸ್ಟ್ರರಿ ಭೇದಿಸಿದ್ದಾರೆ

ಶಿವಮೊಗ್ಗ ಪೊಲೀಸರು. ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಒಂದು ವರ್ಷದ ಹಿಂದೆ ಪಿಜಿಯೊಂದರಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಕುರಿತು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಮಹತ್ವದ ಹಾಗೂ ಬೆಚ್ಚಿಬೀಳಿಸುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

condolence

16.5 ವರ್ಷದ ಅಪ್ರಾಪ್ತ ಬಾಲಕಿಯು 2025 ರ ಜೂನ್ 18 ರಂದು ಪಿಜಿಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆಯು ಇದೇ ವರ್ಷದ ಜುಲೈ 3 ರಂದು ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ, ಬಾಲಕಿಯು ನಾಪತ್ತೆಯಾದ ದಿನವೇ ತಾನು ವಾಸವಿದ್ದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಬಾಲಕಿಯ ಹಿನ್ನೆಲೆ ಹಾಗೂ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ವಿವರಿಸಿದ ಎಸ್‌ಪಿ ನಿಖಿಲ್.ಬಿ, ಅಪ್ರಾಪ್ತೆಯು ಎಂಟನೇ ತರಗತಿಯ ನಂತರ ಶಾಲೆಯನ್ನು ಬಿಟ್ಟು ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡು ಕೊನೆಗೆ ಈ ಪಿಜಿಯಲ್ಲಿ ಆಶ್ರಯ ಪಡೆದಿದ್ದಳು. ಆಕೆಯ ತಾಯಿ ಬೇರೊಬ್ಬರೊಂದಿಗೆ ಹೋಗಿದ್ದು, ತಂದೆ ಮದ್ಯವ್ಯಸನಿಯಾಗಿದ್ದ ಕಾರಣ ಆಕೆಗೆ ಪಿಜಿಯೇ ಆಧಾರವಾಗಿತ್ತು.

ಬಾಲಕಿಯು ಪಿಜಿ ಮಾಲೀಕರಾದ ಇಬ್ಬರು ಮಹಿಳೆಯರ ನಡುವೆ ಒಬ್ಬರ ವಿಷಯ ಮತ್ತೊಬ್ಬರಿಗೆ ಚಾಡಿ ಹೇಳುತ್ತಿದ್ದಳು. ಇದೇ ವಿಚಾರವಾಗಿ ಜೂನ್ 18 ರಂದು ಪಿಜಿಯ ಕೆಳಮಹಡಿಯಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿದ್ದ ಒಬ್ಬ ಮಹಿಳೆ ಓನರ್​ , ಆಕೆಯ ಪತಿ ಸೇರಿ ಬಾಲಕಿಯನ್ನು ಪ್ರಶ್ನಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ತೀವ್ರ ಮನನೊಂದ ಬಾಲಕಿಯು ತಕ್ಷಣವೇ ಮೇಲಿನ ಮಹಡಿಗೆ ತೆರಳಿ ನೇಣಿಗೆ ಶರಣಾಗಿದ್ದಾಳೆ.

ಆತ್ಮಹತ್ಯೆಗೆ ಶರಣಾದವಳ ಮಾಹಿತಿಯನ್ನು ಪಿಜಿ ಓನರ್​ ಅಂದೇ ಪೊಲೀಸರಿಗೆ ನೀಡಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಆದರೆ ಪಿಜಿಯ ಕ್ರೆಡಿಟ್ ಹಾಗು ತಮ್ಮ ತಪ್ಪಿನಿಂದಲೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆತಂಕದಲ್ಲಿ ಬಾಲಕಿಯ ಸಾವಿನ ಬಳಿಕ ಸಾಕ್ಷ್ಯ ನಾಶಪಡಿಸಲು ಮುಂದಾಗಿದ್ದಾರೆ ಬಾಲಕಿ ಮೃತಪಟ್ಟ ವಿಚಾರವನ್ನು ಪೊಲೀಸರಿಗೆ ತಿಳಿಸದ ಆರೋಪಿಗಳಾದ ಇಬ್ಬರು ಮಹಿಳೆ ಓರ್ವ ಪುರುಷ ಹಾಗೂ ಇವರ ಪರಿಚಯಸ್ಥರು ಸೇರಿದಂತೆ ಒಟ್ಟು ನಾಲ್ವರು ಸೇರಿ ಶವವನ್ನು ವಿಲೇವಾರಿ ಮಾಡಲು ಸಂಚು ರೂಪಿಸಿದ್ದಾರೆ.

ಮೃತದೇಹವನ್ನು ಮಡಚಿ ಒಂದು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ರಾತ್ರೋರಾತ್ರಿ ಕಾರಿನಲ್ಲಿ ಕೊಂಡೊಯ್ದು ಸಿದ್ದಾಪುರ ಹಾಗೂ ಜೋಗ ಮಾರ್ಗದ ನಡುವಿನ ಮಾವಿನಗುಂಡಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾರೆ.ಪ್ರಕರಣದಲ್ಲಿ ಎ3 ಮತ್ತು ಎ4 ಆಗಿರುವ ಆರೋಪಿಗಳು ಪರಸ್ಪರ ಪ್ರೀತಿಸುತ್ತಿದ್ದರು .ಜೋಗದ ಸನಿಹ ಬಾಲಕಿಯ ಮೃತದೇಹ ಎಸದ ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿದೆ. ಜಗಳವು ಸಮುದಾಯದ ಪಂಚಾಯಿತಿ ಕಟ್ಟೆಗೆ ತಲುಪಿದೆ. ಪಂಚಾಯಿತಿ ವೇಳೆಯಲ್ಲಿ ಮೃತ ಬಾಲಕಿಯ ವಿಚಾರ ಹೊರಬಿದ್ದಿದೆ. ಆಗ ಪಂಚಾಯಿತಿ ನಡೆಸಿದ ಮುಖಂಡರು ಮೃತ ಬಾಲಕಿಯ ತಂದೆಗೆ ವಿಷಯ ಮುಟ್ಟಿಸಿದ್ದಾರೆ.

ನಂತರ ಬಾಲಕಿಯ ತಂದೆ ,ಪಿಜಿಯಲ್ಲಿ ವಿಚಾರಿಸಿದಾಗ ಬಾಲಕಿ ಪಿಜಿ ತೊರೆದು ಒಂದು ವರ್ಷವಾಗಿದೆ ಎಂದು ಹೇಳಿದ್ದಾರೆ. ಅನುಮಾನಗೊಂಡ ತಂದೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕೇಸ್ ದಾಖಲಿಸಿದರು. ಕಾರ್ಯಚರಣೆ ಇಳಿದ ಪೊಲೀಸರಿಗೆ ಮೊಬೈಲ್ ಸ್ವಿಚ್ ಆಫ್ ಆಗಿ ಒಂದು ವರ್ಷವಾಗಿದೆ ಎಂಬುದು ಗೊತ್ತಾಗಿದೆ. ಆಗ ಮಿಸ್ಸಿಂಗ್ ಕೇಸ್ ನ ಹಿನ್ನೋಟ ಎನೆಂಬುದು ಗೊತ್ತಾಗಿದೆ. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಬಾಲಕಿಯು ಒಂದು ವರ್ಷದಿಂದ ಮೊಬೈಲ್ ಬಳಸದಿರುವುದು ದೃಢಪಟ್ಟಿದೆ. ಅನುಮಾನದ ಮೇರೆಗೆ ಪಿಜಿ ಓನರ್​ನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಸಂಪೂರ್ಣ ಕೃತ್ಯದ ಸತ್ಯಾಸತ್ಯತೆ ಹೊರಬಂದಿದೆ.

ಪ್ರಕರಣದ ಪ್ರಸ್ತುತ ತನಿಖಾ ಹಂತದಲ್ಲಿದ್ದು, ಆರೋಪಿಗಳು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇದೊಂದು ಕೊಲೆಯಾಗಿರಬಹುದೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ. ಆರೋಪಿಗಳು ಶವವನ್ನು ಬಿಸಾಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ದೊರೆತ ಬಾಲಕಿಯ ದೇಹದ ಕೆಲವು ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೈದ್ಯರ ತಂಡವು ಪ್ರಾಥಮಿಕ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆಗಾಗಿ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಪ್ರಯೋಗಾಲಯದ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದ್ದು, ಕೊಲೆ ಎಂಬುದು ದೃಢಪಟ್ಟರೆ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ನಿಖಿಲ್.ಬಿ ಅವರು ತಿಳಿಸಿದ್ದಾರೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ