Bhadra Linganamakki Varahi tunga Dams / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಂಗಾರು ಮಳೆ ಇನ್ನೂ ಸಹ ಬರೋದರಲ್ಲಿಯೇ ಇದೆ. ವಾತಾವರಣ ಮೋಡಕಟ್ಟಿದೆ, ಗಾಳಿ ತಂಪಾಗಿ ಬೀಸುತ್ತಿದೆಯಾದರೂ, ಬರ್ ಅಂತಾ ಸುರಿಯುವ ವರ್ಷಧಾರೆಯ ಸುಳಿವು ಕಾಣುತ್ತಿಲ್ಲ. ಮೇ ತಿಂಗಳಲ್ಲಿ ಬಿದ್ದ ಕೊಂಗಾಟದ ಮಳೆಗೆ ಹದ ಬಿದ್ದ ಮಣ್ಣಲ್ಲಿ ಜೋಳ ಹಾಕಿದವರು, ಬಾ ಬಾರೋ ಮಳೆರಾಯ,, ನೀನಿಲ್ಲದೆ ಬೆಳೆ ಮಣ್ಣು ತಿಂತದೆ ಮಾರಾಯ ಅನ್ನುತ್ತಿದ್ದಾರೆ. ಮಲೆನಾಡಿನ ರೈತರ ಮನಸ್ಸಲ್ಲಿ ಒಂದು ರೀತಿಯ ಭಯ ಹುಟ್ಟಿಸಿರುವ ಮುಂಗಾರಿನ ನಡುವೆ ಶಿವಮೊಗ್ಗದ ಡ್ಯಾಮ್ಗಳು (Bhadra Linganamakki Varahi tunga Dams) ತಳ ಕಾಣುತ್ತಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾದರೆ, ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಜೂನ್ 22, 2026 ರ ಅಂದರೆ ಇವತ್ತಿನ ಅಧಿಕೃತ ಮಾಹಿತಿ ಪ್ರಕಾರ, ಮಲೆನಾಡು ಭಾಗದ ಪ್ರಮುಖ ಜಲಾಶಯಗಳಾದ ಭದ್ರಾ, ಲಿಂಗನಮಕ್ಕಿ, ತುಂಗಾ ಹಾಗೂ ವಾರಾಹಿ ಜಲವಿದ್ಯುತ್ ಯೋಜನೆಯ ಅಣೆಕಟ್ಟುಗಳ ನೀರಿನ ಮಟ್ಟದ ವಿವರ ಹೀಗಿದೆ.
Bhadra Linganamakki Varahi tunga Dams
ಶರಾವತಿ ಕೊಳ್ಳದ ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 1819.00 ಅಡಿ. ಇಲ್ಲಿ ನೀರಿನಮಟ್ಟ ಪ್ರಸ್ತುತ 1745.80 ಅಡಿಗಳಿಗೆ ಕುಸಿದಿದೆ. ಒಟ್ಟು 151.64 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಕೇವಲ 14.91 ಟಿಎಂಸಿ ಅಂದರೆ ಶೇಕಡಾ 9.84 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 1774.20 ಅಡಿಗಳಷ್ಟಿದ್ದು, 45.50 ಟಿಎಂಸಿ ನೀರು ಸಂಗ್ರಹವಿತ್ತು. ಪ್ರಸ್ತುತ ಕೇವಲ 1186 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು ಜಲಾಶಯದ ವ್ಯಾಪ್ತಿಯಲ್ಲಿ ಕೇವಲ 2.0 ಮಿಲಿಮೀಟರ್ ಮಳೆಯಾಗಿದೆ.
ಭದ್ರಾ ಜಲಾಶಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 186 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಸದ್ಯ 136 ಅಡಿ 7.5 ಇಂಚುಗಳಷ್ಟು ಮಾತ್ರ ನೀರಿದೆ. 71.535 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಪೈಕಿ ಈಗ ಕೇವಲ 24.647 ಟಿಎಂಸಿ ನೀರು ಲಭ್ಯವಿದೆ. ಜಲಾಶಯಕ್ಕೆ ಕೇವಲ 373 ಕ್ಯೂಸೆಕ್ಸ್ ಒಳಹರಿವು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 151 ಅಡಿ 7 ಇಂಚು ನೀರಿದ್ದು, ಬರೋಬ್ಬರಿ 9877 ಕ್ಯೂಸೆಕ್ಸ್ ಒಳಹರಿವು ದಾಖಲಾಗಿತ್ತು.
ಗಾಜನೂರು ಸಮೀಪದ ತುಂಗಾ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 587.51 ಮೀಟರ್ ಇದೆ. 3.24 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಇಲ್ಲಿ, ಕೇವಲ 2.008 ಟಿಎಂಸಿ ಬಳಕೆಗೆ ಲಭ್ಯವಿದೆ. ಜಲಾಶಯಕ್ಕೆ ಕೇವಲ 308 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, . ಕಳೆದ ವರ್ಷ ಇದೇ ಜಲಾಶಯಕ್ಕೆ 14145 ಕ್ಯೂಸೆಕ್ಸ್ ಒಳಹರಿವು ಇತ್ತು
ವಾರಾಹಿ ಜಲವಿದ್ಯುತ್ ಯೋಜನೆಯ ಅಣೆಕಟ್ಟುಗಳಾದ ಮಾಣಿ, ಪಿಕಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಲ್ಲೂ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ. ಮಾಣಿ ಜಲಾಶಯದಲ್ಲಿಂದು ನೀರಿನಮಟ್ಟ 574.44 ಮೀಟರ್‌ಗೆ ಇಳಿದಿದೆ. ಇಲ್ಲಿ ಕೇವಲ ಶೇಕಡಾ 16.28 ರಷ್ಟು ನೀರು ಸಂಗ್ರಹವಿದ್ದು, ಮಾಣಿ ಭಾಗದಲ್ಲಿ ಕೇವಲ 1.00 ಮಿಲಿಮೀಟರ್ ಮಳೆಯಾಗಿದೆ. ಪಿಕಪ್ ಡ್ಯಾಂ ನೀರಿನ ಮಟ್ಟ 562.07 ಮೀಟರ್ ಚಕ್ರಾ ಜಲಾಶಯದಲ್ಲಿ 565.45 ಮೀಟರ್ ನೀರಿದ್ದು, ಸಾವೇಹಕ್ಲು ಜಲಾಶಯದಲ್ಲಿ 572.00 ಮೀಟರ್ ನೀರಿದ್ದು, ಲೈವ್ ಕೆಪಾಸಿಟಿ ಶೂನ್ಯಕ್ಕೆ ಇಳಿದಿದೆ.
ಈ ಭಾಗದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ಹುಲಿಕಲ್‌ನಲ್ಲಿ 9.00,ಮಾಸ್ತಿಕಟ್ಟೆಯಲ್ಲಿ 5.00, ಚಕ್ರಾದಲ್ಲಿ 13.00 ಹಾಗೂ ಸಾವೇಹಕ್ಲು ವ್ಯಾಪ್ತಿಯಲ್ಲಿ 17.00 ಮಿಲಿಮೀಟರ್ ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
