ಆನೆ ಬಿಡಾರಗಳಿಗೆ ಕಠಿಣ ನಿಯಮ: ಇದು ಜಾರಿಯಾದ ನಂತರವಷ್ಟೇ ಬಿಡಾರ ಓಪನ್​

ಹಂಚಿಕೊಳ್ಳಿ
WhatsApp Facebook X Telegram
Sakrebailu Elephant Camp to Reopen for Tourists from August 15
Karnataka Elephant Camps sakrebailu elephant

Karnataka Elephant Camps ಶಿವಮೊಗ್ಗ: ಇತ್ತೀಚೆಗೆ ಆನೆಗಳ ನಡುವಿನ ಜಗಳದ ವೇಳೆ ಪ್ರವಾಸಿಯೊಬ್ಬರು ಮೃತಪಟ್ಟಘಟನೆಯ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಸಾಕಾನೆ ಶಿಬಿರಗಳಿಗೆ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು (SOP) ಜಾರಿಗೊಳಿಸಿದೆ. ಆನೆಗಳ ಮೈ ತೊಳೆಯುವುದು, ಮುಟ್ಟುವುದು, ಹತ್ತಿರ ನಿಂತು ಸೆಲ್ಫಿ ತಗೆಯುವುದು ಹಾಗೂ ಆಹಾರ ನೀಡುವುದೂ ಸೇರಿದಂತೆ ಪ್ರವಾಸಿಗರು ಆನೆಗಳೊಂದಿಗೆ ಸಂಪರ್ಕ ಹೊಂದುವ ಹತ್ತಕ್ಕೂ ಹೆಚ್ಚು ಪ್ರಮುಖ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಹಾರಾಜ ಟ್ರೋಫಿ ಕ್ರಿಕೆಟ್ ಹಬ್ಬ: ಶಿವಮೊಗ್ಗ ಯೋಧಾಸ್ ತಂಡದ ಜರ್ಸಿ, ಅಧಿಕೃತ ಗೀತೆ ಅದ್ದೂರಿ ಅನಾವರಣ! 

ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡು ಮೂಲದ ಮಹಿಳಾ ಪ್ರವಾಸಿಯೊಬ್ಬರು ಆನೆಗೆ ಸ್ನಾನ ಮಾಡಿಸುವ ಮತ್ತು ಆಹಾರ ನೀಡುವ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಕಂಜನ್ ಮತ್ತು ಮಾರ್ತಾಂಡ ಎಂಬ ಎರಡು ಸಾಕಾನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ಆನೆಯ ದಾಳಿಗೆ ಸಿಲುಕಿ ಮಾರ್ತಾಂಡ ನೆಲಕ್ಕೆ ಉರುಳಿದಾಗ, ಅದರ ಅಡಿಯಲ್ಲಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. 

ಈ ಘಟನೆಯು ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣವೇ ಎಚ್ಚೆತ್ತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೊಸ ನಿಯಮಾವಳಿಗಳು ರೂಪಿತವಾಗುವವರೆಗೆ ರಾಜ್ಯದ ಎಲ್ಲಾ ಆನೆ ಬಿಡಾರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದ್ದರು. ಈಗ ಹೊಸ ಮಾರ್ಗಸೂಚಿಗಳ ಅಳವಡಿಕೆಯ ನಂತರವಷ್ಟೇ ಈ ಶಿಬಿರಗಳು ಸಾರ್ವಜನಿಕರಿಗೆ ಪುನಃ ಮುಕ್ತವಾಗಲಿವೆ.

ರಾಜ್ಯದ ಪ್ರಮುಖ ಆನೆ ಶಿಬಿರಗಳಾದ ದುಬಾರೆ, ಪನ್ಸೋಲಿ, ಸಕ್ರೆಬೈಲು ಮತ್ತು ಮತ್ತಿಗೋಡುಗಳಲ್ಲಿ ಈವರೆಗೆ ಪ್ರವಾಸಿಗರಿಗೆ ಆನೆಗಳನ್ನು ಅತ್ಯಂತ ಹತ್ತಿರದಿಂದ ನೋಡುವ, ಮುಟ್ಟುವ ಹಾಗೂ ಸ್ನಾನ ಮಾಡಿಸುವ ಅವಕಾಶವಿತ್ತು. ವರ್ಷಕ್ಕೆ ಲಕ್ಷಾಂತರ ಜನರು ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದರು ಮತ್ತು ಇದರ ಸುತ್ತಮುತ್ತ ಹೋಟೆಲ್ ಹಾಗೂ ಹೋಂ ಸ್ಟೇ ಉದ್ಯಮಗಳು ಬೆಳೆದಿದ್ದವು. ಆದರೆ ಈಗಿನ ಕಠಿಣ ನಿರ್ಬಂಧಗಳಿಂದಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯುವ ಆತಂಕ ಎದುರಾಗಿದೆ. 

Karnataka Elephant Camps ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು

ಪ್ರವಾಸಿಗರು ಆನೆಗಳನ್ನು ಮುಟ್ಟುವುದು, ಆಹಾರ ತಿನ್ನಿಸುವುದು, ಸ್ನಾನ ಮಾಡಿಸುವುದು ಮತ್ತು ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಪ್ರವಾಸಿಗರು ಬ್ಯಾರಿಕೇಡ್‌ನ ಹಿಂಭಾಗದ ಹಸಿರು ವಲಯದಲ್ಲೇ ಇರಬೇಕು. ಆನೆಗಳಿಂದ ಕನಿಷ್ಠ 10 ಮೀಟರ್ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. 

ಶಿಬಿರದಲ್ಲಿ ಏಕಕಾಲಕ್ಕೆ 10ಕ್ಕಿಂತ ಹೆಚ್ಚು ಆನೆಗಳನ್ನು ಬಳಸುವಂತಿಲ್ಲ. ಮದದ ಲಕ್ಷಣವಿರುವ, ಆಕ್ರಮಣಕಾರಿ, ಅನಾರೋಗ್ಯ ಪೀಡಿತ, ದಣಿದ ಅಥವಾ ಹೊಸದಾಗಿ ಸೆರೆಸಿಕ್ಕ ಆನೆಗಳನ್ನು ಪ್ರದರ್ಶನಕ್ಕೆ ತರುವಂತಿಲ್ಲ. ಇದನ್ನು ಪ್ರತಿದಿನ ಆರ್‌ಎಫ್‌ಒ ಮತ್ತು ಜೆಆರ್‌ಎಫ್‌ಒ ಅಧಿಕಾರಿಗಳು ಪರಿಶೀಲಿಸಿ ನಿರ್ಧರಿಸುತ್ತಾರೆ. 

ಶಿಬಿರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದ್ದು, ದಿನನಿತ್ಯದ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಕಡ್ಡಾಯವಾಗಿದೆ. 

ಜನಸಂದಣಿ ಹೆಚ್ಚಾದರೆ, ಹವಾಮಾನ ವೈಪರೀತ್ಯ ಉಂಟಾದರೆ ಅಥವಾ ನದಿಯ ನೀರಿನ ಮಟ್ಟ ಏರಿದರೆ ತಕ್ಷಣವೇ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Karnataka Elephant Camps Introduce Strict Safety

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor