ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಪ್ರಸಿದ್ಧ ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 15 ರಿಂದ ಜಾರಿಗೆ ಬರುವಂತೆ ಮಳೆಗಾಲ ಮುಗಿಯುವವರೆಗೂ ಜಲ್ಲಿ ಮತ್ತು ಬೃಹತ್ ಸರಕು ಸಾಗಾಣೆಯ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ, ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
Agumbe Ghat ನಿಷೇಧಕ್ಕೆ ಕಾರಣವೇನು
ಶಿವಮೊಗ್ಗ ಮತ್ತು ಉಡುಪಿ ಸಂಪರ್ಕಿಸುವ ಮತ್ತೊಂದು ಪ್ರಮುಖ ಮಾರ್ಗವಾದ ಹುಲಿಕಲ್ ಘಾಟಿಯಲ್ಲಿ ಇತ್ತೀಚೆಗೆ ಭೂಕುಸಿತ ಸಂಭವಿಸಿತ್ತು. ಅಲ್ಲಿನ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಕಾರಣ, ವಾಹನಗಳ ಒತ್ತಡವೆಲ್ಲವೂ ಈಗ ಆಗುಂಬೆ ಘಾಟಿ ರಸ್ತೆಯ ಮೇಲೆ ಬಿದ್ದಿದೆ. ಮಳೆಗಾಲದಲ್ಲಿ ಭಾರಿ ವಾಹನಗಳ ಓಡಾಟ ಹೆಚ್ಚಾದರೆ ಘಾಟಿಯಲ್ಲಿ ಮತ್ತೆ ಭೂಕುಸಿತ ಸಂಭವಿಸುವ, ಅಪಘಾತಗಳು ಜರುಗುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ.
ಮುಖ್ಯವಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಸಾವಿರಾರು ನಾಗರಿಕರು ತುರ್ತು ಆರೋಗ್ಯ ಚಿಕಿತ್ಸೆಗಾಗಿ ಮಣಿಪಾಲ್, ಉಡುಪಿ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಇದೇ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ಒಂದು ವೇಳೆ ಈ ಸಂಪರ್ಕ ಕಡಿತಗೊಂಡರೆ ನಾಲ್ಕೂ ಜಿಲ್ಲೆಗಳ ರೋಗಿಗಳಿಗೆ ಭಾರಿ ಸಮಸ್ಯೆಯಾಗುವುದನ್ನು ಮನಗಂಡು ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.
Agumbe Ghat ಪರ್ಯಾಯ ಸಂಚಾರ ಮಾರ್ಗಗಳು ಹೀಗಿವೆ:
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳಿಗೆ
ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ರಸ್ತೆ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಚಲಿಸುವುದು.
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳಿಗೆ
ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮಾರ್ಗ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ರಸ್ತೆಯ ಮೂಲಕ ಸಂಚರಿಸಲು ಆದೇಶಿಸಲಾಗಿದೆ.
