ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ–ಬಂಟ್ವಾಳ / ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸಂಭವಿಸಿದ ಆಕಸ್ಮಿಕ ಅವಘಡಗಳಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಸಿಲುಕಿ 9 ವರ್ಷದ ಬಾಲಕ ಮೃತಪಟ್ಟಿದ್ದರೆ, ಶಿವಮೊಗ್ಗದಲ್ಲಿ ಬಟ್ಟೆಗೆ ಇಸ್ತ್ರಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ 14 ವರ್ಷದ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ದುರ್ಮರಣ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಂತಲೆ ಮನೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ. ಮಾಹಿತಿಯ ಪ್ರಕಾರ, ಅಮೃತ್ ರಾತ್ರಿ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದ. ಈ ವೇಳೆ ಮನೆಯ ಕಿಟಕಿಗೆ ಮೊದಲೇ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಇಸ್ತ್ರಿ ಮಾಡುವಾಗ ವಿದ್ಯುತ್ ಅವಘಡಕ್ಕೆ ವಿದ್ಯಾರ್ಥಿ ಬಲಿ
ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ನಗರದ ವಾದಿ-ಏ-ಹುದಾ ಪ್ರದೇಶದಲ್ಲಿ ಬಟ್ಟೆಗೆ ಇಸ್ತ್ರಿ ಮಾಡುವ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ 14 ವರ್ಷದ ಶಾಲಾ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಉಮರ್ ಫಾರುಕ್ (14) ಎಂದು ಗುರುತಿಸಲಾಗಿದೆ. ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿಯೇ ಬಟ್ಟೆಗೆ ಇಸ್ತ್ರಿ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕನಿಗೆ ಕರೆಂಟ್ ಹೊಡೆದಿದೆ. ಆತನನ್ನ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ, ಮಾರ್ಗಮಧ್ಯೆಯೇ ಉಮರ್ ಫಾರುಕ್ ಮೃತಪಟ್ಟಿದ್ದಾನೆ
