
ಮಲೆನಾಡು ಟುಡೆ ಸುದ್ದಿ / ಹೊನ್ನಾಳಿ / ಹೊನ್ನಾಳಿ ಪೇಟೆಯ ಬನ್ನಿ ಮಹಾಂಕಾಳಿ ದೇವಸ್ಥಾನದ ಸಮೀಪ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣವನ್ನು ಅಲ್ಲಿ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಈ ಪೈಕಿ ಶಿವಮೊಗ್ಗ ಮೂಲದ ಮಣಿಕಂಠ ಎಂಬಾತ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ. ವಿವಾಹೇತರ ಸಂಬಂಧದ ವಿಚಾರವಾಗಿ ಉಂಟಾದ ದ್ವೇಷವೇ ಕೊಲೆಗೆ ಕಾರಣವಾಗಿದ್ದು, ಹತ್ಯೆ ನಡೆಸಲು ₹3 ಲಕ್ಷ ಸುಪಾರಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಮೂಲೇರ್ (32) ಎಂಬ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯ ಗಣೇಶ್ (25), ಖಾರದಪುಡಿ ಚಂದ್ರು (30), ಆಕಾಶ್ (26), ಸಂದೀಪ್ (25), ಪುನೀತ್ (27) ಹಾಗೂ ಶಿವಮೊಗ್ಗದ ಮಣಿಕಂಠ (30), ವಿನಯಕುಮಾರ್ (31) ನನ್ನ ಪೊಲೀಸರು ಬಂಧಿಸಿದ್ದಾರೆ.



ಹೊನ್ನಾಳಿ ಮರ್ಡರ್ ಕೇಸ್ ಘಟನೆ ಹನ್ನೆಲೆ
ಹತ್ಯೆಯಾದ ಅಮಿತ್ ಮೂಲೇರ್ ಹಾಗೂ ಆರೋಪಿ ಗಣೇಶ್ ಅವರ ಪತ್ನಿಯ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಅಮಿತ್ ಮತ್ತು ಗಣೇಶ್ ನಡುವೆ ದ್ವೇಷ ಬೆಳೆದಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಅಮಿತ್‌ನನ್ನು ಕೊಲೆ ಮಾಡಿಸಲು ಗಣೇಶ್ ಸಂಚು ರೂಪಿಸಿದ್ದು, ಶಿವಮೊಗ್ಗದ ಮಣಿಕಂಠನಿಗೆ ₹3 ಲಕ್ಷ ಸುಪಾರಿ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊನ್ನಾಳಿ ಮರ್ಡರ್ ಕೇಸ್ ಆರೋಪಿಗಳನ್ನು ಪತ್ತೆಹಚ್ಚಲು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಅವರು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಪಿಎಸ್‌ಐ ಗುರುಶಾಂತಯ್ಯ, ಹೊಳೆಬಸಪ್ಪ, ನಿರ್ಮಲಾ, ಎಎಸ್‌ಐ ಹರೀಶ್, ತೀರ್ಥಲಿಂಗಪ್ಪ, ಅಶೋಕ್ ರೆಡ್ಡಿ, ತಿಪ್ಪೇಸ್ವಾಮಿ ಹಾಗೂ ಇತರ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಪ್ರಶಂಸಿಸಿದ್ದಾರೆ.

