ಶಿವಮೊಗ್ಗ: ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ನಾಲ್ಕು ವರ್ಷದ ಪುಟ್ಟ ಮಗು ಹಾಗೂ ಓರ್ವ ವ್ಯಕ್ತಿಯ ಮೇಲೆ ನಾಯಿಗಳು ಭೀಕರವಾಗಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಮೇ 6ರ ಬುಧವಾರ ಸಂಜೆ ಮನೆ ಮುಂಭಾಗ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ಏಕಾಏಕಿ ಎರಗಿದೆ. ಮಗುವಿನ ಕಿರುಚಾಟ ಕೇಳಿದ ತಕ್ಷಣವೇ ಸ್ಥಳೀಯರು ಓಡಿ ಬಂದು ನಾಯಿಯನ್ನು ಓಡಿಸಿದ್ದರಿಂದ ಪ್ರಾಣಾಪಾಯ ತಪ್ಪಿದಂತಾಗಿದೆ . ಈ ಘಟನೆಯ ಬೆನ್ನಲ್ಲೇ, ಇಂದು (ಗುರುವಾರ) ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣಾ ನಾಯ್ಕ್ ಎಂಬುವವರ ಮೇಲೂ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ.
ಕೇವಲ ಮನುಷ್ಯರಷ್ಟೇ ಅಲ್ಲದೆ, ಈ ಭಾಗದಲ್ಲಿ ಆಕಳ ಕರುಗಳ ಮೇಲೆಯೂ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ಸಂಭವಿಸುತ್ತಿದ್ದರೂ, ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
