ಕುವೆಂಪು ವಿವಿಯಲ್ಲಿ ಗೋಲ್‌ಮಾಲ್ : ಎನ್‌ಎಸ್‌ಯುಐ ಆರೋಪ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಶುಲ್ಕ ಹೆಚ್ಚಳ, ಡಿಜಿಟಲ್ ಮೌಲ್ಯಮಾಪನದಲ್ಲಿನ ಅಕ್ರಮ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಜಿಲ್ಲಾ ಘಟಕದ ವತಿಯಿಂದ ಕುಲಪತಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 3 ವರ್ಷಗಳಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳ ಬಗ್ಗೆ ಎನ್‌ಎಸ್‌ಯುಐ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಈ ಹಿಂದೆ ಘಟಿಕೋತ್ಸವದ ಸಂದರ್ಭದಲ್ಲಿ ರಾಜ್ಯಪಾಲರು ಆಗಮಿಸಿದ್ದಾಗಲೂ ಅವರ ಗಮನ ಸೆಳೆದು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯಪಾಲರು ಗಮನಹರಿಸಿದ್ದರೂ ಸಹ ವಿವಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಪದೇ ಪದೇ ವಿದ್ಯಾರ್ಥಿ ವಿರೋಧಿ ನಿಲುವನ್ನೇ ಪ್ರದರ್ಶಿಸುತ್ತಿದ್ದಾರೆ. ಕೇವಲ 15 ದಿನಗಳ ಹಿಂದೆಯೂ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಇಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗಿತ್ತು ಎಂದು ಎನ್‌ಎಸ್‌ಯುಐ ನಗರಾಧ್ಯಕ್ಷರು ತಿಳಿಸಿದ್ದಾರೆ.
ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಇರದ ರೀತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಶೇಕಡಾ 10 ರಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದರು. ಒಂದು ಸೆಮಿಸ್ಟರ್‌ನಿಂದ ಮತ್ತೊಂದು ಸೆಮಿಸ್ಟರ್‌ಗೆ ಸಾವಿರಾರು ರೂಪಾಯಿ ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಕಳೆದ 3 ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವವೇ ನಡೆದಿಲ್ಲ, ಆದರೂ ಘಟಿಕೋತ್ಸವದ ಹೆಸರಿನಲ್ಲಿ 3000 ರೂಪಾಯಿ ಶುಲ್ಕವನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ತಕ್ಷಣವೇ ಈ ಶೇಕಡಾ 10 ರಷ್ಟು ಶುಲ್ಕ ಹೆಚ್ಚಳವನ್ನು ಕೈಬಿಡಬೇಕು, ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎನ್‌ಎಸ್‌ಯುಐ ಮುಖಂಡರು ದೂರಿದರು. ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ಒಂದು ಪೋರ್ಟಲ್‌ನಲ್ಲಿ ಪಾಸ್ ಎಂದು ಬಂದರೆ, ಮತ್ತೊಂದು ಪೋರ್ಟಲ್‌ನಲ್ಲಿ ಫೇಲ್ ಎಂದು ತೋರಿಸುತ್ತಿದೆ. ಅತಿ ಹೆಚ್ಚು ಅಂಕ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇವಲ 13, 0 ಹಾಗೂ 1 ಅಂಕಗಳನ್ನು ನೀಡಲಾಗುತ್ತಿದೆ. ಈ ಕುರಿತು ಸುಮಾರು 50 ವಿದ್ಯಾರ್ಥಿಗಳ ಪಟ್ಟಿಯನ್ನು ನೀಡಿ ಮನವಿ ಮಾಡಿದಾಗ, ರಾತ್ರೋರಾತ್ರಿ ಆ ಫಲಿತಾಂಶಗಳನ್ನು ಸರಿಪಡಿಸಲಾಗಿದೆ. ಸಾವಿರಾರು ರೂಪಾಯಿ ಹಣ ಪಡೆದುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳ ಅಂಕಗಳನ್ನು ಬೇರೆಯವರಿಗೆ ನೀಡುವ ಮೂಲಕ ಅಕ್ರಮ ಎಸಗಲಾಗುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಸಂಪನ್ಮೂಲಗಳ ಮೇಲಿನ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಮರೆತು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ತಕ್ಷಣವೇ ಸರ್ಕಾರ ಹಾಗೂ ವಿವಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಶುಲ್ಕ ಕಡಿತಗೊಳಿಸಬೇಕು ಮತ್ತು ಡಿಜಿಟಲ್ ಮೌಲ್ಯಮಾಪನದಲ್ಲಿನ ದೋಷಗಳನ್ನು ಸರಿಪಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
#KuvempuUniversity #NSUIProtest #Shivamogga #StudentsProtest #KarnatakaNews #MalenaduToday
