FIR ದಾಖಲಿಸ್ತೇನೆ ಎಂದ ಶರತ್ ಅನಂತಮೂರ್ತಿ, ಕುವೆಂಪು ವಿವಿಯಲ್ಲಿ ಇಷ್ಟೆಲ್ಲಾ ಏಕಾಯ್ತು!
ಮಲೆನಾಡು ಟುಡೆ ಸುದ್ದಿ / ಶಂಕರಘಟ್ಟ / ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ನಡೆದ ಘಟನೆ ಬಗ್ಗೆ ವಿವಿ ಕುಲಪತಿ ಶರತ್ ಅನಂತಮೂರ್ತಿ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎಂಬಿಎ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವಕ್ಕಾಗಿ ಹಳೆ ಕಾನ್ವೊಕೇಶನ್ ಹಾಲ್‌ನಲ್ಲಿ ಮಾರುಕಟ್ಟೆ ಮಳಿಗೆಗಳನ್ನು ಆಯೋಜಿಸಿದ್ದರು. ಈ ವೇಳೆ ದಿಢೀರನೆ ನುಗ್ಗಿದ ಕೆಲವರು ಕುಂಡಗಳನ್ನು ಒಡೆದು ಗಲಾಟೆ ಮಾಡುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಅಲ್ಲಿ ತಮ್ಮ ವಿರುದ್ಧ ಘೋಷಣೆಗಳನ್ನು ಕೂಗಿ, ಅವರನ್ನು ಸುತ್ತುವರಿದು ತಳ್ಳಾಡಿದ್ದಾರೆ. ಅಲ್ಲದೆ, ಮುಖ್ಯ ದ್ವಾರದ ಎದುರಿರುವ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದ ಮುಂದಿದ್ದ ಮಡಿಕೆಗಳನ್ನು ಬೇಕೆಂದೇ ಒಡೆದು ಕುವೆಂಪು ಅವರಿಗೆ ಅವಮಾನವಾಗುವ ರೀತಿಯಲ್ಲಿ ಕಿಡಿಗೇಡಿಗಳು ವರ್ತಿಸಿದ್ದಾರೆ ಎಂದು ದೂರಿದರು.
ಘಟನೆಯಲ್ಲಿ ಪಾಲ್ಗೊಂಡಿರುವುದು ಯಾವ ಸಂಘಟನೆ ಅಥವಾ ಪಕ್ಷದವರು ಎಂಬುದು ಸ್ಪಷ್ಟವಾಗಿಲ್ಲ ಹಾಗೂ ಅವರು ಯಾವುದೇ ನಿರ್ದಿಷ್ಟ ಸಮಸ್ಯೆಯನ್ನು ಹೇಳಿಕೊಂಡಿಲ್ಲ. ಆದರೆ ಈ ಗುಂಪಿನಲ್ಲಿದ್ದ 4-5 ಮಂದಿ 4 ದಿನಗಳ ಹಿಂದೆಯೂ ಬಂದು ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಸಹಜವಾಗಿರುವ ಕೆಲ ಕುಂದುಕೊರತೆಗಳನ್ನು ಆಲಿಸಿ, ಅವುಗಳಲ್ಲಿ ಅರ್ಧದಷ್ಟು ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಲಾಗಿದೆ. ಆದಾಗ್ಯೂ, ಈ ರೀತಿ ಏಕಾಏಕಿ ನುಗ್ಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನ್ಯಾಕ್ ಮೌಲ್ಯಮಾಪನದಲ್ಲಿ ಕುವೆಂಪು ವಿವಿ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪೈಕಿ 2ನೇ ಸ್ಥಾನ ಪಡೆದಿದ್ದು, ಸಿಬ್ಬಂದಿ ವರ್ಗದವರ ಸತತ ಪರಿಶ್ರಮದಿಂದ ವಿವಿಗೆ ಒಳ್ಳೆಯ ಹೆಸರು ಬರುತ್ತಿದೆ. ಪಾರದರ್ಶಕತೆಯಿಂದ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಸುಳ್ಳು ಆಪಾದನೆಗಳನ್ನು ಹೊರಿಸಿ, ಕುವೆಂಪು ಅವರ ಹೆಸರಿಗೆ ಮತ್ತು ವಿಶ್ವವಿದ್ಯಾಲಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿದರು.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಇಂತಹ ಹಿಂಸಾಚಾರಕ್ಕೆ ಅವಕಾಶವಿಲ್ಲ, ಶಾಂತಿಯಿಂದ ವಿದ್ಯಾಭ್ಯಾಸ ನಡೆಯಬೇಕು. ಇಲ್ಲಿನ ಲೋಪದೋಷಗಳ ಬಗ್ಗೆ ಹೇಳಲು ಬಾರದೆ ನೇರವಾಗಿ ಬಂದು ದಾಂಧಲೆ ನಡೆಸುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 1 ವಾರದ ಹಿಂದೆ ಯಾವುದೇ ಗಡುವು ನೀಡಿರಲಿಲ್ಲ, ಕೆಲವು ಸಮಸ್ಯೆಗಳ ಬಗ್ಗೆ ಹೇಳಿದ್ದರು, ಅದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಮಾಲೋಚನೆ ನಡೆಯುತ್ತಿದೆ. ತಕ್ಷಣಕ್ಕೆ ಎಲ್ಲದಕ್ಕೂ ಪರಿಹಾರ ನೀಡಲು ಸಾಧ್ಯವಿಲ್ಲ. ವಿವಿಯಿಂದ ಹೊರಹೋದ ಕೆಲವು ಅಧಿಕಾರಿಗಳ ಮೇಲೂ ಈ ಘಟನೆಗೆ ಕುಮ್ಮಕ್ಕು ನೀಡಿರುವ ಬಗ್ಗೆ ಗುಮಾನಿ ಇದೆ. ಆದರೆ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಪ್ರೊ.ಶರತ್ ಅನಂತಮೂರ್ತಿ ಸ್ಪಷ್ಟಪಡಿಸಿದ್ದಾರೆ.
#KuvempuUniversity #SharathAnanthamurthy #ShivamoggaNews #Shankaraghatta #MalenaduToday #Shimoga #KarnatakaNews #BreakingNews #KannadaNews #ShimogaUpdates
