ಎಚ್ಚರಿಕೆ ಬೆನ್ನಲ್ಲೇ ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್​ ಪೊಲೀಸರ ಆಪರೇಷನ್ ಆಟೋ ಶುರು! 1 ದಿನ 70 ಆಟೋ ವಶಕ್ಕೆ

ಹಂಚಿಕೊಳ್ಳಿ
WhatsApp Facebook X Telegram
70 Auto Rickshaws Seized During Police and RTO Inspection in Shivamogga
70 Auto Rickshaws Seized During Police and RTO Inspection in Shivamogga

RTO Inspection in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ ಆಟೋ ರಿಕ್ಷಾಗಳ ದಾಖಲೆ ಪರಿಶೀಲನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಟ್ರಾಫಿಕ್​ ಪೊಲೀಸ್ ನೀಡಿದ್ದ ಮುನ್ನೆಚ್ಚರಿಕೆಗೆ ಪೂರಕವಾಗಿ ಇವತ್ತು ಸೋಮವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆದಿದೆ. ಟ್ರಾಫಿಕ್ ಪೊಲೀಸರು ಬೆಳಗ್ಗೆಯಿಂದ ಕಾರ್ಯಾಚರಣೆಗೆ ಇಳಿದಿದ್ದು, ಚಾಲ್ತಿಯಲ್ಲಿಲ್ಲದ ಹಾಗೂ ನಿಯಮ ಉಲ್ಲಂಘಿಸಿದ ಒಟ್ಟು 70 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್ ಇನ್​ಸ್ಪೆಕ್ಟರ್​ ದೇವರಾಜ್​ ಮಾಹಿತಿ ನೀಡಿದ್ದಾರೆ. ಅದರ ವಿವರ ಹೀಗಿದೆ.

ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಳ್ಳುವಂತೆ ಪೊಲೀಸ್ ಇಲಾಖೆ ಈ ಹಿಂದೆಯೇ ಸೂಚನೆ ನೀಡಿತ್ತು. ಇದೀಗ ಮುಂದುವರಿದ ಭಾಗವಾಗಿ ನಗರದ ಅಶೋಕ ಸರ್ಕಲ್, ಶಿವಪ್ಪನಾಯಕನ ಸರ್ಕಲ್ ಹಾಗೂ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಚಾಲನಾ ಪರವಾನಗಿ, ವಿಮೆ, ಫಿಟ್‌ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಡಿಸ್‌ಪ್ಲೇ ಕಾರ್ಡ್ ಸೇರಿದಂತೆ ವಾಹನ ಸಂಚಾರಕ್ಕೆ ಅಗತ್ಯವಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ದಾಖಲೆಗಳು ಚಾಲ್ತಿಯಲ್ಲಿಲ್ಲದ ಮತ್ತು ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಒಟ್ಟು 70 ಆಟೋ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ಪೈಕಿ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋ ರಿಕ್ಷಾಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ದೇವರಾಜ್​ರವರು ತಿಳಿಸಿದ್ದಾರೆ.

13ರಂದು ಆಟೋ ಚಾಲಕರಿಗೆ ನೀಡಲಾಗಿತ್ತು ಎಚ್ಚರಿಕೆ

ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದ ಬಳಿ ಸಿಟಿ ಬಸ್‌ಗಳ ಸಂಚಾರಕ್ಕೆ ಸಂಬಂಧಿಸಿದಂತೆ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕರ ಮನವಿ ಹಾಗೂ ಸಮಸ್ಯೆಗಳನ್ನು ಆಲಿಸಿದ್ದರು. ಈ ವೇಳೆ ಸಿಟಿ ಬಸ್‌ಗಳ ನಿಯಮ ಉಲ್ಲಂಘನೆ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಪೊಲೀಸರು, ಆಟೋ ಚಾಲಕರಿಗೂ ಸಂಚಾರ ನಿಯಮಗಳು ಹಾಗೂ ಇಲಾಖೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದರು. ಸಿಟಿ ಬಸ್‌ಗಳ ವಿಚಾರದಲ್ಲಿ ಆಟೋ ಚಾಲಕರ ಬೇಡಿಕೆಯನ್ನು ಆಲಿಸುವುದರ ಜೊತೆಗೆ, ಆಟೋಗಳ ದಾಖಲೆಗಳನ್ನೂ ಪರಿಶೀಲಿಸಲಾಗುವುದು ಎಂದಿದ್ದ ಅಧಿಕಾರಿಗಳು ದಾಖಲೆಗಳಿಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಸಂಚರಿಸುವ ಆಟೋಗಳು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗುವುದು ಅಂತಾ ವಾರ್ನ್ ಮಾಡಿದ್ರು.

ಇನ್ನೂ ಮುಂದಿನ ದಿನಗಳಲ್ಲಿಯೂ ಇದೇ ರೀತಿ ತಪಾಸಣೆ ಕಾರ್ಯಾಚರಣೆ ಮುಂದುವರಿಯಲಿದೆ ಅಂತಾ ಪೊಲೀಸ್ ಇಲಾಖೆ ತಿಳಿಸಿದೆ. ಹೀಗಾಗಿ ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಚಾಲನಾ ಪರವಾನಗಿ, ವಿಮೆ, ಫಿಟ್‌ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ಡಿಸ್‌ಪ್ಲೇ ಕಾರ್ಡ್ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಂಡೇ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor