Yash ಶಿವಮೊಗ್ಗ : ಜೀವನವೇ ಹಾಗೆ, ನಾವು ಅಂದುಕೊಂಡಿದ್ದು ಯಾವುದೂ ನಡೆಯುವುದಿಲ್ಲ. ಅಂದುಕೊಳ್ಳದೇ ಇರುವುದು ಆಕಸ್ಮಿಕವಾಗಿ ನಡೆದುಬಿಡುತ್ತದೆ. ಕೆಲವೊಮ್ಮೆ ಕೆಲವೊಂದು ಆಕಸ್ಮಿಕಗಳು ಲಾಟರಿಯ ಮೂಲಕ ಜೀವನವನ್ನೇ ಬದಲಿಸಿದರೆ, ಇನ್ನು ಕೆಲವು ಆಕಸ್ಮಿಕಗಳು ಆರೋಗ್ಯಕ್ಕೆ ಪೆಟ್ಟು ಕೊಡುವ ಮೂಲಕ ವ್ಯಕ್ತಿಯ ಜೀವನ, ಸೌಂದರ್ಯ ಅಷ್ಟೇ ಅಲ್ಲದೆ ಆತನ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ.
ಇದೇ ರೀತಿಯ ಒಂದು ಕರುಣಾಜನಕ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ. ಸದಾ ಉತ್ಸಾಹದಿಂದ ಎಲ್ಲರೊಡನೆ ಬೆರೆತು, ಎಲ್ಲರನ್ನೂ ಪ್ರೀತಿಸುತ್ತಾ ಜೀವನ ನಡೆಸಬೇಕೆಂದುಕೊಂಡಿದ್ದ ಯುವಕನ ಬದುಕಿನಲ್ಲಿ ನಡೆದ ಆಕಸ್ಮಿಕ ಅನಾರೋಗ್ಯ ಆತನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದೆ. ಹೌದು, ನಾವು ಹೇಳುತ್ತಿರುವುದು ಶಿವಮೊಗ್ಗದ ಸುನೀಲ್ ಎಂಬಾತನ ಬಗ್ಗೆ. ಶಿವಮೊಗ್ಗ ಮೂಲದ 32 ವರ್ಷದ ಯುವಕ ಸುನೀಲ್ ಅವರಿಗೆ ಇದೀಗ ರೆಕ್ಟಲ್ ಕ್ಯಾನ್ಸರ್ ಆವರಿಸಿಕೊಂಡಿದೆ. ಇಬ್ಬರು ಸಹೋದರರು ಹಾಗೂ ತಾಯಿಯೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದ ಈತನ ಬಾಳಿನಲ್ಲಿ ಬಂದ ಕ್ಯಾನ್ಸರ್, ಇದೀಗ ಕಣ್ಮುಚ್ಚಿ ತೆರೆಯುವುದರೊಳಗೆ 4ನೇ ಹಂತ ತಲುಪಿದೆ.
ಆತನ ಕುಟುಂಬವು ಹೇಗಾದರೂ ಮಾಡಿ ಸುನೀಲ್‌ನನ್ನು ಬದುಕಿಸಿಕೊಳ್ಳಬೇಕೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದೆ. ಆದರೆ, ಕುಟುಂಬ ಹಾಗೂ ಸಹೋದರರು ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆಗೆ ಬೇಕಾದ ಸಂಪೂರ್ಣ ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಆದರೂ ಸಹ ಆತನ ಸಹೋದರರು ಛಲ ಬಿಡಲಿಲ್ಲ. ಅಣ್ಣ, ನಾವು ನಿನ್ನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುತ್ತೇವೆ. ಕ್ಯಾನ್ಸರ್‌ಗೆ ನೀನು ಸೋಲಲು ನಾವು ಬಿಡುವುದಿಲ್ಲ, ಅದನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಅಣ್ಣನಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಹಸ್ತ ಚಾಚಿ ಹಣ ಸಂಗ್ರಹಿಸಿ, ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಅಣ್ಣನನ್ನು ಉಳಿಸಿಕೊಳ್ಳಲು ಸಹೋದರರು ಪಡುತ್ತಿರುವ ಈ ಪಾಡು, ಕಷ್ಟ ಬಂದಾಗ ಒಡಹುಟ್ಟಿದವರು ಹೇಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ.
ಇದರ ನಡುವೆ ಸುನೀಲ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಎಂದರೆ ಎಲ್ಲಿಲ್ಲದ ಪ್ರೀತಿ. ಅವರು ಶಿವಮೊಗ್ಗದ ಯಶ್ ಫ್ಯಾನ್ಸ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ. ಈ ನೋವಿನ ನಡುವೆಯೂ ಸುನೀಲ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಒಮ್ಮೆ ಭೇಟಿ ಮಾಡಬೇಕು, ಮಾತನಾಡಬೇಕು ಎಂಬ ತೀವ್ರ ಹಂಬಲವಿತ್ತು. ಇದನ್ನು ತನ್ನ ತಮ್ಮಂದಿರ ಬಳಿ ಹೇಳಿಕೊಂಡಾಗ, ಅವರು ಇಲ್ಲ ಎನ್ನಲಿಲ್ಲ. ಹೇಗೋ ಈ ವಿಷಯ ರಾಕಿಂಗ್ ಸ್ಟಾರ್ ಯಶ್ ಅವರ ಕಿವಿಗೆ ತಲುಪುವಂತೆ ಮಾಡಿದ್ದಾರೆ.
Yash ಅಭಿಮಾನಿಯ ಸಂಕಷ್ಟಕ್ಕೆ ಮಿಡಿದ ಯಶ್, ಅಮೆರಿಕದಿಂದಲೇ ವಿಡಿಯೋ ಕಾಲ್
ಸುನೀಲ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ವಿಚಾರ ನಟ ರಾಕಿಂಗ್ ಸ್ಟಾರ್ ಯಶ್ ಅವರ ಗಮನಕ್ಕೆ ಬಂದಿದೆ. ಆ ಸಮಯದಲ್ಲಿ ಶೂಟಿಂಗ್‌ಗಾಗಿ ಅಮೆರಿಕದಲ್ಲಿದ್ದ ಯಶ್, ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದಲೇ ಸುನೀಲ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಸುನೀಲ್ ಅವರ ಆರೋಗ್ಯ ವಿಚಾರಿಸಿದ ನಟ, ಅವರ ಕುಟುಂಬದ ಸದಸ್ಯರೊಂದಿಗೂ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಶಿವಮೊಗ್ಗದ ಸುನಿಲ್ ಕುಮಾರ್ ಎನ್ ಅವರೊಂದಿಗೆ ಹಾಗೂ ಅವರ ಕುಟುಂಬದವರೊಂದಿಗೆ ನಟ ಯಶ್ ಅವರು ಅಮೆರಿಕದಿಂದ ವಿಡಿಯೋ ಕರೆ ಮೂಲಕ ಸುದೀರ್ಘವಾಗಿ ಮಾತನಾಡಿದರು. ಈ ಸಂಭಾಷಣೆಯ ಉದ್ದಕ್ಕೂ ಯಶ್ ಅವರು ಕ್ಯಾನ್ಸರ್ ರೋಗದ ತೀವ್ರತೆ, ವೈದ್ಯಕೀಯ ವ್ಯವಸ್ಥೆಯ ವಿಳಂಬ ಹಾಗೂ ರೋಗಿಯ ಇಚ್ಛಾಶಕ್ತಿಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ವಿಸ್ತೃತವಾಗಿ ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವು ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ ಎಂದು ಯಶ್ ತೀವ್ರ ಬೇಸರ ವ್ಯಕ್ತಪಡಿಸಿದರು. ಹಿಂದೆಲ್ಲಾ ಈ ರೋಗವು ಅಪರೂಪಕ್ಕೆ ಯಾರಿಗೋ ಒಬ್ಬರಿಗೆ ಬರುತ್ತಿತ್ತು. ಆದರೆ ಈಗ ತಮ್ಮ ಪರಿಚಯಸ್ಥರಲ್ಲೇ ಅನೇಕರಿಗೆ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಹಾರ ಪದ್ಧತಿ ಹಾಗೂ ನೀರಿನ ಸಮಸ್ಯೆ ಎಂದು ಅವರು ಅಭಿಪ್ರಾಯಪಟ್ಟರು. ಕುಟುಂಬದಲ್ಲಿ ಯಾರಿಗಾದರೂ ಈ ರೀತಿಯ ಕಾಯಿಲೆ ಬಂದರೆ, ಮುನ್ನೆಚ್ಚರಿಕಾ ಕ್ರಮವಾಗಿ ಮನೆಯ ಇತರ ಎಲ್ಲಾ ಸದಸ್ಯರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಅವರು ಕಿವಿಮಾತು ಹೇಳಿದರು.
ಸುನಿಲ್ ಅವರಿಗೆ ಆರಂಭದಲ್ಲಿ ಪೈಲ್ಸ್ ಎಂದು ತಪ್ಪಾಗಿ ಚಿಕಿತ್ಸೆ ನೀಡಿ, 3 ತಿಂಗಳ ಬಳಿಕ 4ನೇ ಹಂತದ ರೆಕ್ಟಲ್ ಕ್ಯಾನ್ಸರ್ ಎಂದು ಪತ್ತೆಯಾದ ವಿಚಾರವನ್ನು ಕೇಳಿ ಯಶ್ ಅವರು ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು. ರೋಗದ ಲಕ್ಷಣಗಳು ಕಾಣಿಸಿಕೊಂಡಾಗ ರೋಗಿಗಳು ತಮ್ಮೂರಿನಿಂದ ಬೆಂಗಳೂರಿನಂತಹ ಮಹಾನಗರಗಳಿಗೆ ಬಂದು ಎಚ್ ಸಿ ಜಿ ಯಂತಹ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಷ್ಟರಲ್ಲಿ ಬಹಳ ಸಮಯ ವ್ಯರ್ಥವಾಗುತ್ತದೆ. ವರದಿಗಳು ಬರಲು 15 ರಿಂದ 20 ದಿನಗಳು ಬೇಕಾಗುವುದರಿಂದ, ಆ ಅವಧಿಯಲ್ಲಿ ರೋಗವು ದೇಹದೆಲ್ಲೆಡೆ ಹರಡಿಕೊಳ್ಳುತ್ತದೆ ಎಂಬುದು ಅತ್ಯಂತ ಖೇದಕರ ವಿಚಾರ ಎಂದು ಅವರು ನುಡಿದರು. ದೇಶದಲ್ಲಿ ಮೂಲಭೂತ ವೈದ್ಯಕೀಯ ಸೌಲಭ್ಯಗಳು ಪ್ರತಿಯೊಂದು ಊರುಗಳಲ್ಲೂ ಲಭ್ಯವಾಗಬೇಕು. ನೆಮ್ಮದಿಯಾಗಿ ಬದುಕಲು ದುಡಿಯುವ ಮನುಷ್ಯನಿಗೆ ಅನಾರೋಗ್ಯ ಎದುರಾದಾಗ ಆತನ ಮಿತಿ ಹಾಗೂ ಅಸಹಾಯಕತೆ ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ವ್ಯವಸ್ಥೆಗಳು ತ್ವರಿತವಾಗಿ ಸ್ಪಂದಿಸುವಂತಾಗಬೇಕು ಎಂದು ಯಶ್ ಆಶಯ ವ್ಯಕ್ತಪಡಿಸಿದರು.
ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಸುನಿಲ್ ಅವರನ್ನು ಯಶ್ ಅವರು ಪ್ರೀತಿಯಿಂದ ಬಾಸ್ ಎಂದು ಸಂಬೋಧಿಸಿ ಆರೋಗ್ಯ ವಿಚಾರಿಸಿದರು. ಕ್ಯಾನ್ಸರ್ 4ನೇ ಹಂತದಲ್ಲಿದೆ ಎಂದು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು ಎಂದು ಅವರು ರೋಗಿಗೆ ಹುರಿದುಂಬಿಸಿದರು. ನಮ್ಮ ಕಲ್ಪನೆಗೆ ಮೀರಿ ಕೆಟ್ಟ ಘಟನೆಗಳು ಹೇಗೆ ನಡೆಯುತ್ತವೆಯೋ, ಅದೇ ರೀತಿ ಕಲ್ಪನೆಗೆ ಮೀರಿದ ಪವಾಡಗಳು ಹಾಗೂ ಒಳ್ಳೆಯ ಘಟನೆಗಳು ಕೂಡ ನಡೆಯುತ್ತವೆ. ಆದ್ದರಿಂದ ಚಿಕಿತ್ಸೆಯ ಜೊತೆಗೆ ಇಚ್ಛಾಶಕ್ತಿಯನ್ನು ಬಲವಾಗಿ ಇಟ್ಟುಕೊಳ್ಳಬೇಕು. ದೇಹವು ಯಾವಾಗಲೂ ಮನಸ್ಸಿನ ಆಜ್ಞೆಯನ್ನು ಪಾಲಿಸುತ್ತದೆ. ಮನಸ್ಸಿನಲ್ಲಿ ಉತ್ಸಾಹವಿದ್ದರೆ ದೇಹವು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದೆ ಎಂದು ಯಶ್ ಅವರು ಸುನಿಲ್ ಅವರಿಗೆ ಧೈರ್ಯ ತುಂಬಿದರು. ವೈದ್ಯರು ಸೂಚಿಸುವ ಚಿಕಿತ್ಸೆಯನ್ನು ಸರಿಯಾಗಿ ಪಾಲಿಸಿಕೊಂಡು ಉಳಿದದ್ದನ್ನು ದೇವರ ಮೇಲೆ ಭಾರ ಹಾಕುವಂತೆ ಅವರು ಸಲಹೆ ನೀಡಿದರು.
ಸುನಿಲ್ ಅವರ ಅನಾರೋಗ್ಯದ ವಿಚಾರವು ರಾಕಿ ಎಂಬುವವರ ಮೂಲಕ ಕೇವಲ ಒಂದು ದಿನದ ಹಿಂದೆಯಷ್ಟೇ ತಮಗೆ ತಿಳಿಯಿತು ಎಂದು ಯಶ್ ಸ್ಪಷ್ಟಪಡಿಸಿದರು. ತಾವು ಅಮೆರಿಕದಲ್ಲಿರುವ ಕಾರಣ ಬಿಡುವು ಮಾಡಿಕೊಂಡು ಸಂಜೆ ಸಮಯದಲ್ಲಿ ಕರೆ ಮಾಡಿರುವುದಾಗಿ ತಿಳಿಸಿದರು. ಸುನಿಲ್ ಅವರ ಸ್ಥಿತಿಯನ್ನು ನೋಡಿ ತಮಗೂ ಏನು ಮಾತನಾಡಬೇಕು ಎಂದು ತೋಚುತ್ತಿಲ್ಲ, ಆದರೆ ಅವರ ಜೊತೆ ನಿಂತು ಧೈರ್ಯ ತುಂಬುವುದು ತಮ್ಮ ಕರ್ತವ್ಯ ಎಂದರು.
ಶಿವಮೊಗ್ಗದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ ಮೂಲಕ ಸುನಿಲ್ ಅವರು ತೊಡಗಿಸಿಕೊಂಡಿದ್ದ ಕಲಾ ಸೇವೆಯನ್ನು ಯಶ್ ನೆನಪಿಸಿಕೊಂಡರು. ಸಿನಿಮಾಗಳು, ತಮ್ಮ ಮುಂಬರುವ ಟಾಕ್ಸಿಕ್ ಚಿತ್ರದಂತಹ ವಿಚಾರಗಳಿಗಿಂತ ಮನುಷ್ಯನ ಜೀವ ಹಾಗೂ ಆರೋಗ್ಯ ಬಹಳ ಮುಖ್ಯ. ಸಿನಿಮಾ ವಿಚಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು. ಸುನಿಲ್ ಅವರ ಸಹೋದರರು ಒಗ್ಗಟ್ಟಿನಿಂದ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತಿರುವುದನ್ನು ಯಶ್ ಶ್ಲಾಘಿಸಿದರು. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಬರುತ್ತವೆ, ಆದರೆ ನಾವು ಅದರ ವಿರುದ್ಧ ಹೇಗೆ ಹೋರಾಡುತ್ತೇವೆ ಎಂಬುದೇ ಅಂತಿಮವಾಗಿ ಮುಖ್ಯವಾಗುತ್ತದೆ ಎಂದು ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕುಟುಂಬಸ್ಥರ ಮಾತುಗಳನ್ನು ಸಾವಧಾನದಿಂದ ಆಲಿಸಿದ ಯಶ್ ಅವರು, ಮನುಷ್ಯನಿಗೆ ಇಚ್ಛಾಶಕ್ತಿ ಬಹಳ ಮುಖ್ಯ ಎಂದು ರೋಗಿ ಸುನಿಲ್ ಅವರಿಗೆ ಕಿವಿಮಾತು ಹೇಳಿದ್ದಾರೆ. ದೇಹವು ಮನಸ್ಸಿನ ಮಾತು ಕೇಳುತ್ತದೆ, ಹಾಗಾಗಿ ಮನಸ್ಸನ್ನು ಗಟ್ಟಿಯಾಗಿಟ್ಟುಕೊಂಡು ಉತ್ಸಾಹದಿಂದ ಇರಬೇಕು, ವೈದ್ಯರ ಚಿಕಿತ್ಸೆ ಹಾಗೂ ದೇವರ ಮೇಲೆ ನಂಬಿಕೆ ಇಟ್ಟು ಧೈರ್ಯದಿಂದ ರೋಗವನ್ನು ಎದುರಿಸುವಂತೆ ಅವರು ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳಬಾರದು ಎಂದು ಅವರು ರೋಗಿಗೆ ಮತ್ತು ಅವರ ಜೊತೆಗಿರುವ ಸ್ನೇಹಿತರಿಗೆ ಹುರಿದುಂಬಿಸಿದ್ದಾರೆ.
ಇದೇ ವೇಳೆ ಸುನಿಲ್ ಅವರು ಈ ಹಿಂದೆ ‘ಸ್ಟೈಲ್ ಡ್ಯಾನ್ಸ್ ಗ್ರೂಪ್’ ಮೂಲಕ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ತಾವು ಭೇಟಿಯಾಗಿದ್ದ ಹಳೆಯ ನೆನಪನ್ನು ಯಶ್ ಮೆಲುಕು ಹಾಕಿದರು. ಅಲ್ಲದೆ, ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಮಾಡುವುದಾಗಿ ಕುಟುಂಬಕ್ಕೆ ಯಶ್ ಭರವಸೆ ನೀಡಿದ್ದಾರೆ. ಕ್ಯಾನ್ಸರ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಯಶ್, ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಹಾಗೂ ನೀರಿನ ಸಮಸ್ಯೆಯಿಂದ ಈ ರೋಗ ಸಾಮಾನ್ಯವಾಗಿಬಿಟ್ಟಿದೆ, ಆದರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಚಿಕಿತ್ಸೆ ಬಗ್ಗೆ ಮಾತ್ರ ಗಮನಹರಿಸಿ ಎಂದು ಸಾಂತ್ವನ ಹೇಳಿದ್ದಾರೆ.
ಕುಟುಂಬಸ್ಥರು ತಿಳಿಸಿರುವ ಪ್ರಕಾರ, ಸುನೀಲ್ ಅವರಿಗೆ ಕ್ಯಾನ್ಸರ್ ಪತ್ತೆಯಾದ ಮೇಲೂ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಮೋಟಿವೇಶನ್ ವಿಡಿಯೋಗಳನ್ನು ನೋಡುತ್ತಾ ಧೈರ್ಯ ತಂದುಕೊಳ್ಳುತ್ತಿದ್ದರು. ಪ್ರಸ್ತುತ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಪ್ರಸ್ತುತ ಸುನೀಲ್ರವರ ಚಿಕಿತ್ಸೆಗೆ 19 ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು ಸಹಾಯ ಮಾಡಲು ಬಯಸುವವರು ಈ ನಂಬರ್ಗೆ 81230-05603 ಪೋನ್ ಪೇ ಮೂಲಕ ಸಹಾಯ ಮಾಡಬಹುದು
Yash Video Calls Cancer Patient Sunil Kumar

Yash Video Calls Cancer Patient Sunil Kumar
