ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಡಿಜಿಟಲ್ ವ್ಯಾಲ್ಯೂವೇಶನ್ ಹೆಸರಿನಲ್ಲಿ ಭ್ರಷ್ಟಾಚಾರ?; ಡಿ.ಎಸ್. ಅರುಣ್ ಗಂಭೀರ ಆರೋಪ

ಹಂಚಿಕೊಳ್ಳಿ
WhatsApp Facebook X Telegram
Kuvempu University Digital Valuation Scam
Kuvempu University Digital Valuation Scam

Kuvempu University ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತಡವಾಗಿ ಅಂಕಪಟ್ಟಿ ವಿತರಣೆ, ಮೌಲ್ಯಮಾಪನದಲ್ಲಿ ಗೊಂದಲ ಸೇರಿದಂತೆ ಇನ್ನಿತರ ಸಾಲು ಸಾಲು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಕುವೆಂಪು ವಿಶ್ವವಿದ್ಯಾಲಯದ ವಿರುದ್ಧ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಗಂಭೀರ ಆರೋಪ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬೃಹತ್ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಿವಮೊಗ್ಗ: ಸಿಟಿ ಬಸ್‌ಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆಯೇ? ಈ ನಂಬರ್‌ಗೆ ಕಾಲ್ ಮಾಡಿ

ಇಂದು ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ವ್ಯಾಲ್ಯೂವೇಶನ್ ಹೆಸರಿನಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಹೊರತುಪಡಿಸಿದರೆ ಬೇರೆ ಯಾವುದೇ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿಲ್ಲ. ಆದರೆ ಕುವೆಂಪು ವಿವಿಯಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಅನುಮತಿ ನೀಡಿದವರು ಯಾರು? ಯಾರ ಅನುಮೋದನೆ ಪಡೆದು ಡಿಜಿಟಲ್ ವ್ಯಾಲ್ಯೂವೇಶನ್‌ಗೆ ಟೆಂಡರ್ ನೀಡಲಾಗಿದೆ ಎಂದು ನಾವು ಈಗಾಗಲೇ ಮನವಿ ಪತ್ರ ಸಲ್ಲಿಸಿ ಪ್ರಶ್ನಿಸಿದ್ದರೂ, ಕುಲಪತಿಗಳಿಂದ ಯಾವುದೇ ಉತ್ತರ ಬಂದಿಲ್ಲ. ಈ ಮೌನವೇ ಇಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಬಲವಾದ ಅನುಮಾನ ಮೂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅವರು, ಸಾಂಪ್ರದಾಯಿಕವಾಗಿ ಶಿಕ್ಷಕರ ಮೂಲಕ ನಡೆಸುವ ಮೌಲ್ಯಮಾಪನ ಹಾಗೂ ಡಿಜಿಟಲ್ ವ್ಯಾಲ್ಯೂವೇಶನ್‌ಗೆ ತಗಲುವ ವೆಚ್ಚಗಳ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದರು. ಒಂದು ಸೆಮಿಸ್ಟರ್ ಪರೀಕ್ಷೆ ನಡೆದಾಗ ಅಲ್ಲಿ ಒಟ್ಟು 2,80,000 ಉತ್ತರ ಪತ್ರಿಕೆಗಳು ಇರುತ್ತವೆ. ಸಾಮಾನ್ಯ ಮೌಲ್ಯಮಾಪನದಲ್ಲಿ ಪ್ರತಿ ಬುಕ್‌ಲೆಟ್ ತಪಾಸಣೆಗೆ ಶಿಕ್ಷಕರಿಗೆ 15 ರೂಪಾಯಿ ನೀಡಲಾಗುತ್ತದೆ. ಈ ಲೆಕ್ಕದಲ್ಲಿ ಶಿಕ್ಷಕರ ಮೂಲಕ ಒಂದು ಸೆಮಿಸ್ಟರ್ ಮುಗಿಸಲು ಸುಮಾರು 1 ಕೋಟಿ 1ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಈ ಡಿಜಿಟಲ್ ವ್ಯಾಲ್ಯೂವೇಶನ್‌ನಲ್ಲಿ ವಿಪರೀತ ದುಂದುವೆಚ್ಚ ಮಾಡಲಾಗುತ್ತಿದೆ. ಇಲ್ಲಿ ಪ್ರತಿ ಬುಕ್‌ಲೆಟ್ ಮೌಲ್ಯಮಾಪನಕ್ಕೆ ಬರೋಬ್ಬರಿ 54 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, ಒಂದು ಸೆಮಿಸ್ಟರ್ ಪ್ರಕ್ರಿಯೆ ಮುಗಿಸಲು ಬರೋಬ್ಬರಿ 2.36 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.

ಡಿಜಿಟಲ್ ವ್ಯಾಲ್ಯೂವೇಶನ್ ಜಾರಿಗೆ ಬಂದರೆ ಪಾರದರ್ಶಕತೆ ಇರುತ್ತದೆ, ಮಕ್ಕಳಿಗೆ ಬೇಗ ಅಂಕಪಟ್ಟಿ ಸಿಗುತ್ತದೆ ಎಂಬ ಆಶಯ ನಮ್ಮದಾಗಿತ್ತು. ಆದರೆ, 2024-25 ಹಾಗೂ 2025-26ನೇ ಸಾಲಿನ ಅಂಕಪಟ್ಟಿಗಳು ಇದುವರೆಗೂ ವಿದ್ಯಾರ್ಥಿಗಳ ಕೈಸೇರಿಲ್ಲ. ಈ ವಿಳಂಬಕ್ಕೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಕುಲಪತಿಗಳು ಕೂಡಲೇ ಈ ಡಿಜಿಟಲ್ ವ್ಯಾಲ್ಯೂವೇಶನ್ ವ್ಯವಸ್ಥೆಯನ್ನು ನಿಲ್ಲಿಸಬೇಕು. ನಿಮ್ಮ ಒಪ್ಪಂದ ಏನೇ ಇರಲಿ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸುವವರೆಗೂ ಸಂಬಂಧಪಟ್ಟ ಏಜೆನ್ಸಿಗೆ ಯಾವುದೇ ಪೇಮೆಂಟ್ ಮಾಡಬಾರದು. ತಕ್ಷಣವೇ ಈ ವ್ಯವಸ್ಥೆಯನ್ನು ಕೈಬಿಡಬೇಕು. ಒಂದು ವೇಳೆ ನಮ್ಮ ಆಗ್ರಹಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಡಿ.ಎಸ್. ಅರುಣ್ ಎಚ್ಚರಿಕೆ ನೀಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor