ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಳಂಬ, ಕೆ ಎಸ್​ ಈಶ್ವರಪ್ಪ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Eshwarappa Slams Congress on Cabinet Delay
Eshwarappa Slams Congress on Cabinet Delay

Eshwarappa ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ತೀವ್ರ ಪೈಪೋಟಿಯಿಂದಾಗಿ ಸಚಿವ ಸಂಪುಟ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಇದರ ನೇರ ಪರಿಣಾಮವಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಆರೋಪಿಸಿದ್ದಾರೆ.

ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಅದ್ಧೂರಿ ವಿಜಯೋತ್ಸವ

ಇಂದು  ನಗರದ ಪತ್ರಿಕಾ ಭವನದಲ್ಲಿ ನಡೆದ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ಒಂದು ಸಚಿವರ ಪಟ್ಟಿ ಇದ್ದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದು ಮತ್ತೊಂದು ಪಟ್ಟಿಯಾಗಿದೆ. ಇಬ್ಬರೂ ನಾಯಕರು ತಮ್ಮ ತಮ್ಮ ಆಪ್ತ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿರುವುದರಿಂದ ಸಂಪುಟ ವಿಸ್ತರಣೆ ಕಸರತ್ತು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಇದೇ ಗೊಂದಲ ಮುಂದುವರಿದಿದ್ದು, ಈ ಆಂತರಿಕ ರಾಜಕೀಯ ಪೈಪೋಟಿಯಿಂದಾಗಿ ರಾಜ್ಯದ ಜನಸಾಮಾನ್ಯರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು.

ರಾಜ್ಯದಲ್ಲಿ ಮಳೆ ಕೊರತೆ, ಅತಿವೃಷ್ಟಿ ಹಾಗೂ ರೈತರ ಬೆಳೆ ಹಾನಿ ಕುರಿತು ಸರ್ಕಾರ ಇದುವರೆಗೂ ಸಮರ್ಪಕ ಸಮೀಕ್ಷೆಯನ್ನೇ ನಡೆಸಿಲ್ಲ ಎಂದು ಆರೋಪಿಸಿದ ಈಶ್ವರಪ್ಪ, ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್  ನೆರವು ಕೋರುವ ಮುನ್ನ ಬೆಳೆ ನಷ್ಟದ ನಿಖರ ವರದಿಯನ್ನು ಸಿದ್ಧಪಡಿಸಬೇಕಿತ್ತು ಎಂದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದೆ. ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಸರ್ಕಾರದ ಇಡೀ ಗಮನ ಕೇವಲ ಸಂಪುಟ ವಿಸ್ತರಣೆ ಮತ್ತು ಆಂತರಿಕ ಅಧಿಕಾರ ರಾಜಕ್ಕಾಗಿಯೇ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಇರುವ ಎನ್‌ಡಿಆರ್‌ಎಫ್‌ನ ಬೆಳೆ ಹಾನಿ ಪರಿಹಾರ ಮಾನದಂಡಗಳು ಹಳೆಯದಾಗಿದ್ದು, ಇಂದಿನ ಪರಿಸ್ಥಿತಿಗೆ ತಕ್ಕಂತೆ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು ಕನಿಷ್ಠ ಹತ್ತು ಪಟ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಬಲವಾದ ಶಿಫಾರಸುಮಾಡಬೇಕು ಎಂದು ಈಶ್ವರಪ್ಪ ಇದೇ ವೇಳೆ ಆಗ್ರಹಿಸಿದರು. ಇದರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಮಾಹಿತಿ ಇಲ್ಲ ಎಂದು ಹೇಳಿರುವುದನ್ನು ಟೀಕಿಸಿದ ಅವರು, ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ತಾರಕಕ್ಕೇರಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor