ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸೇರಿ ಒಟ್ಟು 52 ಹುದ್ದೆಗಳಿಗೆ (Shivamogga Zilla Panchayat Recruitment) ನೇರ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಆ.27ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25, 2026 ಕೊನೆಯ ದಿನವಾಗಿದೆ. ಅಧಿಕೃತ ಶಿವಮೊಗ್ಗ ಜಿಲ್ಲಾಡಳಿತದ ನೇಮಕಾತಿ ಪುಟದಲ್ಲಿಯೂ https://shivamogga.nic.in/en/notice_category/recruitment/ ಅರ್ಜಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯ 7 ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 52 ಹುದ್ದೆಗಳ ಪೈಕಿ ಕರವಸೂಲಿಗಾರ ಹುದ್ದೆಗಳು 21 ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು 31 ಖಾಲಿ ಇವೆ. ಪ್ರತಿ ಗ್ರಾಮ ಪಂಚಾಯತಿಗೆ ಪ್ರತ್ಯೇಕ ಮೀಸಲಾತಿಯನ್ನು ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಗ್ರಾಮ ಪಂಚಾಯತಿಗೆ ನಿಗದಿಯಾದ ಹುದ್ದೆ ಮತ್ತು ಮೀಸಲಾತಿಯನ್ನು ಪರಿಶೀಲಿಸಬೇಕಿದೆ ಎಂದು ಸೂಚಿಸಲಾಗಿದೆ.
ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶ?
ನೇಮಕಾತಿಯ ಪ್ರಮುಖ ಕಂಡೀಷನ್ ಅಡಿಯಲ್ಲಿ, ಯಾವ ಗ್ರಾಮ ಪಂಚಾಯತಿಯಲ್ಲಿ ಹುದ್ದೆ ಖಾಲಿ ಇದೆಯೋ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಅರ್ಹ ಅಭ್ಯರ್ಥಿಗಳು ಮಾತ್ರ ಆ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ತನ್ನ ವಾಸಸ್ಥಳವನ್ನು ದೃಢೀಕರಿಸಲು ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಪಡೆದ ವಾಸಸ್ಥಳ ದೃಢೀಕರಣ ಪ್ರಮಾಣಪತ್ರವನ್ನು ಸಲ್ಲಿಸಬೇಕಿದೆ.
ಕರವಸೂಲಿಗಾರ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕನ್ನಡ ಒಂದು ಭಾಷೆಯಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ CBSE 12ನೇ ತರಗತಿ, ISC 12ನೇ ತರಗತಿ, ಇತರ ರಾಜ್ಯ ಸರ್ಕಾರಗಳ ಮಂಡಳಿ ನಡೆಸುವ 12ನೇ ತರಗತಿ ಪರೀಕ್ಷೆ, NIOS ಮೂಲಕ ಪಡೆದ ಹಿರಿಯ ಪ್ರೌಢ ಶಿಕ್ಷಣ ಅಥವಾ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನೂ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಬಳಿಕ ನಿಗದಿತ ಅವಧಿಯ ಪಾಲಿಟೆಕ್ನಿಕ್ ಡಿಪ್ಲೊಮಾ ಅಥವಾ ವೃತ್ತಿಪರ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೂ ಅಧಿಸೂಚನೆಯಲ್ಲಿ ತಿಳಿಸಿರುವ ಷರತ್ತುಗಳನ್ವಯ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಕಂಪ್ಯೂಟರ್ ಜ್ಞಾನ ಕಡ್ಡಾಯ
ಕರವಸೂಲಿಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕನಿಷ್ಠ 3 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್ ಪೂರ್ಣಗೊಳಿಸಿರುವ ಪ್ರಮಾಣಪತ್ರ ಹೊಂದಿರಬೇಕು. ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಆದರೆ ಕಂಪ್ಯೂಟರ್ ವಿದ್ಯಾರ್ಹತೆ ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ. ಇನ್ನೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರುವ ಪ್ರಮಾಣಪತ್ರ ಹೊಂದಿರಬೇಕು. ಆಯ್ಕೆ ವಿಧಾನದಲ್ಲಿ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ 50% ಹಾಗೂ ಪ್ರತ್ಯೇಕವಾಗಿ ನಡೆಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ 50% ಪ್ರಾಮುಖ್ಯತೆ ನೀಡಿ ಮೆರಿಟ್ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನೂ ಮುಖ್ಯವಾಗಿ ಕಂಪ್ಯೂಟರ್ ತರಬೇತಿ ಪ್ರಮಾಣಪತ್ರದಲ್ಲಿ ಕೋರ್ಸ್‌ನ ಅವಧಿ ಸ್ಪಷ್ಟವಾಗಿ ನಮೂದಾಗಿರಬೇಕು. ಕರವಸೂಲಿಗಾರ ಹುದ್ದೆಗೆ 3 ತಿಂಗಳು ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ 6 ತಿಂಗಳ ಅವಧಿಯನ್ನು ದೃಢಪಡಿಸುವ ಪ್ರಮಾಣಪತ್ರ ಅಗತ್ಯವಾಗಿದ್ದು, ಕೋರ್ಸ್ ಅವಧಿಯೇ ನಮೂದಾಗದ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ. ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಯಾಗಿದೆ. ಮಾಜಿ ಸೈನಿಕರು, ವಿಶೇಷಚೇತನರು, ವಿಧವೆಯರು ಸೇರಿದಂತೆ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಅರ್ಹ ವರ್ಗಗಳಿಗೆ ಸರ್ಕಾರದ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಇದಕ್ಕಾಗಿ ನಿಗದಿತ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ
- ಈ ನೇಮಕಾತಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ.
- ಶಿವಮೊಗ್ಗ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಲಗತ್ತಿಸಬೇಕು.
- ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಗದಿತ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್ ಅನ್ನು “ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಶಿವಮೊಗ್ಗ” ಅವರ ಹೆಸರಿನಲ್ಲಿ ಪಡೆದು ಲಗತ್ತಿಸಬೇಕು.
- ನಂತರ ಅರ್ಜಿಯನ್ನು ಅಭ್ಯರ್ಥಿ ಅರ್ಜಿ ಸಲ್ಲಿಸಲು ಅರ್ಹರಾಗಿರುವ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಖುದ್ದಾಗಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 27, 2026ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲೂ ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ.
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹50 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇತರ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ಪಾವತಿಸಬೇಕಿದೆ. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆಯ ಅಂಕಪಟ್ಟಿ, ಕಂಪ್ಯೂಟರ್ ಸಾಕ್ಷರತೆ ಅಥವಾ ತರಬೇತಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಹಾಗೂ ವಾಸಸ್ಥಳ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಅನ್ವಯಿಸುವ ಅಭ್ಯರ್ಥಿಗಳು ಅಂಗವಿಕಲ ಪ್ರಮಾಣಪತ್ರ, ಮಾಜಿ ಸೈನಿಕ ಪ್ರಮಾಣಪತ್ರ, ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ ಹಾಗೂ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರವನ್ನೂ ಲಗತ್ತಿಸಬೇಕು.
ಇದರೊಂದಿಗೆ ಆಧಾರ್ ಕಾರ್ಡ್ ಪ್ರತಿ, ಈಗಾಗಲೇ ಉದ್ಯೋಗದಲ್ಲಿರುವವರು ಸಂಬಂಧಪಟ್ಟ ಉದ್ಯೋಗ ಸಂಸ್ಥೆಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಪಡೆದ ಡಿ.ಡಿ.ಯನ್ನೂ ಸಲ್ಲಿಸಬೇಕು. ಅರ್ಜಿಯೊಂದಿಗೆ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸುವಂತೆ ಅರ್ಜಿ ನಮೂನೆಯಲ್ಲಿ ಸೂಚಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಸರಿಯಾಗಿ ನಮೂದಿಸಬೇಕು. ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಇದೇ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್‌ಗೆ ಕಳುಹಿಸಲಾಗುತ್ತದೆ. ನಂತರ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಬದಲಾವಣೆಗೆ ಸಂಬಂಧಿಸಿದ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅರ್ಜಿ ನಮೂನೆಯಲ್ಲಿ ತಿಳಿಸಲಾಗಿದೆ.
ಅಧಿಕೃತ ವೆಬ್‌ಸೈಟ್ ಮತ್ತು ಅರ್ಜಿ ಡೌನ್‌ಲೋಡ್ ಲಿಂಕ್
ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲಾಡಳಿತದ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಇಲ್ಲಿ ವೀಕ್ಷಿಸಬಹುದು. ನೇರವಾಗಿ ಅರ್ಜಿ ನಮೂನೆ PDF ಡೌನ್‌ಲೋಡ್ ಮಾಡಲು ಇಲ್ಲಿ (https://shivamogga.nic.in/en/notice_category/recruitment/) ಕ್ಲಿಕ್ ಮಾಡಬಹುದು. 21 ಪುಟಗಳ ಸಂಪೂರ್ಣ ನೇಮಕಾತಿ ಅಧಿಸೂಚನೆ PDF ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಬಹುದು. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಪ್ರಕಟಿಸಿರುವ 08182-267243 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಅಥವಾ [email protected] ಇ-ಮೇಲ್ ವಿಳಾಸವನ್ನೂ ಸಂಪರ್ಕಿಸಬಹದಾಗಿದೆ.
