ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗ್ಯಾರೇಜ್ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಗಣೇಶ್ (34) ಹಾಗೂ ಗಿರೀಶ್ (23) ಶಿಕ್ಷೆಗೆ ಗುರಿಯಾದವರು. ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್ ಎದುರು ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ರೇಷ್ಮೆ ಇಲಾಖೆ ಹಿಂಭಾಗ ಗ್ಯಾರೇಜ್ ನಡೆಸುತ್ತಿದ್ದ ಸ್ಟೀಫನ್ ಶ್ರೀನಿವಾಸ್ (68) ಕೊಲೆಯಾಗಿದ್ದರು.
ಗ್ಯಾರೇಜ್ ಮಾಲೀಕನ ಕೊಲೆ ಪ್ರಕರಣ?
ಸ್ಟೀಫನ್ ಶ್ರೀನಿವಾಸ್ ಅವರ ಗ್ಯಾರೇಜ್ ಹಿಂಭಾಗದಲ್ಲಿ ಬಿ.ಎಚ್. ರಸ್ತೆಗೆ ಹೊಂದಿಕೊಂಡಂತೆ ಗಣೇಶ್‌ಗೆ ಸೇರಿದ ಜಾಗವಿದ್ದು, ಅಲ್ಲಿ ರಾಜು ನಾಯ್ಕ್ ಎಂಬುವವರು ಗ್ಯಾರೇಜ್ ನಡೆಸುತ್ತಿದ್ದರು. ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣದ ಹಿನ್ನೆಲೆಯಲ್ಲಿ ರಾಜು ನಾಯ್ಕ್ ನಡೆಸುತ್ತಿದ್ದ ಗ್ಯಾರೇಜ್‌ನ ಸ್ವಲ್ಪ ಭಾಗ ರಸ್ತೆಗೆ ಹೋಗಿತ್ತು. ಇದರಿಂದ ಗ್ಯಾರೇಜ್‌ಗೆ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೀಫನ್ ಶ್ರೀನಿವಾಸ್ ಅವರ ಗ್ಯಾರೇಜ್ ಪಕ್ಕದಲ್ಲಿರುವ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ಗಣೇಶ್ ತಿಳಿಸಿದ್ದ. ಅಲ್ಲದೆ, ಗ್ಯಾರೇಜ್ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸುವಂತೆ ಸ್ಟೀಫನ್ ಶ್ರೀನಿವಾಸ್ ಅವರಿಗೆ ಕೇಳಿದ್ದ. ಆದರೆ ಇದಕ್ಕೆ ಶ್ರೀನಿವಾಸ್ ಒಪ್ಪಿರಲಿಲ್ಲ.
ಲಾಂಗ್ ಹಾಗೂ ಕಾರಿನ ಟೈರ್‌ನಿಂದ ಹಲ್ಲೆ
2020ರ ನವೆಂಬರ್ 23ರಂದು ಗಣೇಶ್ ಹಾಗೂ ಗಿರೀಶ್ ಶ್ರೀನಿವಾಸ್ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದರು.. ಅಲ್ಲದೆ, ಕಾರಿನ ಟೈರ್ ಅನ್ನು ಶ್ರೀನಿವಾಸ್ ಅವರ ತಲೆಯ ಮೇಲೆ ಎತ್ತಿಹಾಕಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 2021ರ ಜನವರಿ 12ರಂದು ಅವರು ಮೃತಪಟ್ಟಿದ್ದರು. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302, 120ಬಿ ಸಹಿತ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇಬ್ಬರ ವಿರುದ್ಧದ ಆರೋಪ ಸಾಬೀತು
ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ದೀಪಕ್ ಎಂ.ಎಸ್. ಅವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ಸ ಲ್ಲಿಸಿದ್ದರು. ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.
ವಿಚಾರಣೆ ಪೂರ್ಣಗೊಂಡು ಗಣೇಶ್ ಹಾಗೂ ಗಿರೀಶ್ ವಿರುದ್ಧದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಳ ಅವರು 2026ರ ನವೆಂಬರ್ 24ರಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
