ಸುದ್ದಿಯ ಸ್ಥಳ: Bhadravati, Shivamogga, Karnataka · Davanagere, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗಾಂಜಾ ಸಂಗ್ರಹಣೆ, ಸಾಗಣೆ, ಸರಬರಾಜು ಹಾಗೂ ಮಾರಾಟ ಸೇರಿದಂತೆ ನಿರಂತರವಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸವಾಯಿಪಾಳ್ಯ ನಿವಾಸಿ ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜ್ಜು ಅಲಿಯಾಸ್ ಫುಕು (28) ಎಂಬಾತನನ್ನ ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಯೇ ಬಂಧನದಲ್ಲಿಡಲು ದಾವಣಗೆರೆ ಪೂರ್ವ ವಲಯ ಐಜಿಪಿ ಆದೇಶಿಸಿದ್ದಾರೆ.
ಆರೋಪಿಯ ವಿರುದ್ಧ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 20(b)(ii)(B) ಹಾಗೂ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(B) ಅನ್ವಯ 2 ಪ್ರತ್ಯೇಕ ಪ್ರಕರಣಗಳು ದಾಖಲಿವೆ. ಇದಲ್ಲದೆ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ, 1 ವಂಚನೆ, 1 ಮಹಿಳೆಯ ಮೇಲೆ ಹಲ್ಲೆ, 1 ದೊಂಬಿ ಗಲಾಟೆ ಹಾಗೂ 2 ಮುಂಜಾಗ್ರತಾ ಕ್ರಮದ ಪ್ರಕರಣಗಳು ದಾಖಲಾಗಿವೆ. ಜಯನಗರ ಪೊಲೀಸ್ ಠಾಣೆಯಲ್ಲಿ 1 ಕೊಲೆ ಯತ್ನ ಪ್ರಕರಣ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ಕೋಕಾ ಕಾಯ್ದೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ (ಅಫ್ರೆ) ಪ್ರಕರಣ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆದ ಬಳಿಕವೂ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ, ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಣೆ ಚಟುವಟಿಕೆಗಳಲ್ಲಿ ಪದೇಪದೇ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಇಂತಹ ಚಟುವಟಿಕೆಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜತೆಗೆ ಯುವಜನತೆಯ ಆರೋಗ್ಯ, ಭವಿಷ್ಯ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾದಕ ವಸ್ತುಗಳ ಜಾಲಕ್ಕೆ ಸಿಲುಕುವ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ಈ ಹಿನ್ನೆಲೆಯಲ್ಲಿಯೇ ಆತನ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂಜಾಗ್ರತಾ ಬಂಧನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಮಾದಕ ವಸ್ತುಗಳು ಮತ್ತು ಮನಃಪ್ರಭಾವಕ ಪದಾರ್ಥಗಳ ಅಕ್ರಮ ಸಾಗಣೆ ತಡೆ ಕಾಯ್ದೆ, 1988 (Prevention of Illicit Traffic in Narcotic Drugs and Psychotropic Substances Act – PIT NDPS) ಅಡಿಯಲ್ಲಿ ಆರೋಪಿಯನ್ನು ಬಂಧನದಲ್ಲಿಡುವಂತೆ ದೊಡ್ಡಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಶಿವಮೊಗ್ಗ ಎ ಉಪವಿಭಾಗದ ಡಿಎಸ್‌ಪಿ ಕೋರಿದ್ದರು.
ಮೇಲಾಗಿ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಈ ಕುರಿತು ಅಗತ್ಯ ದಾಖಲಾತಿಗಳೊಂದಿಗೆ ವಿವರವಾದ ವರದಿ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಪರಿಶೀಲಿಸಿದ ಐಜಿಪಿ, ಮೊಹಮ್ಮದ್ ಅಜರುದ್ದೀನ್‌ನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶಿಸಿದ್ದಾರೆ.
