ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ನಿದಿಗೆಯಲ್ಲಿರುವ ಕಿಯೋನಿಕ್ಸ್ ಐಟಿ ಪಾರ್ಕ್ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಅಭಿವೃದ್ಧಿಗೆ ಆದ್ಯತೆ ನೀಡಲು ಸಾಧ್ಯವಾಗದಿದ್ದರೆ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಅಥವಾ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಲಾದ ಇಲ್ಲಿನ ಕಿಯೋನಿಕ್ಸ್ ಐಟಿ ಪಾರ್ಕ್‌ನಿಂದ ಹಲವು ಕಂಪನಿಗಳು ನಿರ್ಗಮಿಸಿವೆ. ಉಳಿದ ಕಂಪನಿಗಳ ಗುತ್ತಿಗೆ ನವೀಕರಣಕ್ಕೂ ಆಡಳಿತಾತ್ಮಕ ತೊಡಕು ಎದುರಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿಗೆ ಸೀಮಿತವಾಗಿದ್ದ ಐಟಿ ಕ್ಷೇತ್ರವನ್ನು ಇತರ ನಗರಗಳಿಗೂ ವಿಸ್ತರಿಸುವ ಉದ್ದೇಶದಿಂದ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಶಿವಮೊಗ್ಗದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು. ಸುಮಾರು 13 ಕೋಟಿ ವೆಚ್ಚದಲ್ಲಿ 70 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ಆರಂಭದಲ್ಲಿ ಹಲವು ಕಂಪನಿಗಳು ಕಾರ್ಯಾರಂಭ ಮಾಡಿದ್ದವು. ಇದರಿಂದ ಕಿಯೋನಿಕ್ಸ್‌ಗೆ ವಿವಿಧ ಕಂಪನಿಗಳಿಂದ ಬಾಡಿಗೆ ರೂಪದಲ್ಲಿ ಮಾಸಿಕ ಸುಮಾರು 15 ಲಕ್ಷ ಆದಾಯ ಬರುತ್ತಿತ್ತು ಎಂದರು.
ಆದರೆ, ಈಗ ಕಟ್ಟಡದ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ನಾಲ್ಕು ಮಹಡಿಗಳಲ್ಲಿಯೂ ಹವಾನಿಯಂತ್ರಣ ವ್ಯವಸ್ಥೆಯಿಲ್ಲ. ಮಳೆ ಬಂದಾಗ ಕಟ್ಟಡದೊಳಗೆ ನೀರು ನುಗ್ಗುತ್ತದೆ. ಪಿಒಪಿ ಮೇಲ್ಛಾವಣಿ ಕುಸಿದಿದ್ದು, ಗಾಳಿಯ ಸಂಚಾರವೂ ಸಮರ್ಪಕವಾಗಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡದ ಕೆಲವು ಭಾಗಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿದ್ದು, ಸ್ವಚ್ಛತೆಯ ಸಮಸ್ಯೆ ಎದುರಾಗಿದೆ ಎಂದು ದೂರಿದರು.
ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಅಗತ್ಯವಾದ ಕಟ್ಟಡದ ಸ್ವಾಧೀನ ಪ್ರಮಾಣಪತ್ರ, ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಹಾಗೂ ರಚನಾತ್ಮಕ ಸದೃಢತಾ ಪ್ರಮಾಣಪತ್ರಗಳು ಲಭ್ಯವಿಲ್ಲ. ಶಿವಮೊಗ್ಗ ಕಚೇರಿಯಲ್ಲಾಗಲಿ, ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಾಗಲಿ ದಾಖಲೆಗಳು ಇಲ್ಲದಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾಯಂ ಸಿಬ್ಬಂದಿಯೂ ಇಲ್ಲ ಎಂದು ಹೇಳಿದರು.
ಐಟಿ ಪಾರ್ಕ್‌ನಲ್ಲಿ ಟಿಸಿಎಸ್ ಸೇರಿದಂತೆ ವಿವಿಧ ಕಂಪನಿಗಳ ನೇಮಕಾತಿ ಪರೀಕ್ಷೆಗಳು ನಡೆಯುತ್ತವೆ. ಪ್ರತಿ ವಾರ ಸಾವಿರಾರು ಅಭ್ಯರ್ಥಿಗಳು ಆಗಮಿಸುತ್ತಾರೆ. ಆದರೆ ಶೌಚಾಲಯ, ಕ್ಯಾಂಟೀನ್, ವೈ-ಫೈ ಹಾಗೂ ಜಾಮರ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಟ್ಟಡದ ಗಾಜುಗಳು ಒಡೆದಿದ್ದು, ವಿದ್ಯುತ್ ಉಪಕರಣಗಳಿರುವ ಪ್ರದೇಶದಲ್ಲಿಯೂ ಮಳೆ ನೀರು ನಿಲ್ಲುತ್ತಿದೆ. ಇದು ಉದ್ಯೋಗಿಗಳು ಮತ್ತು ಪರೀಕ್ಷಾರ್ಥಿಗಳ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಐಟಿ ಪಾರ್ಕ್‌ಗೆ ಹೊಂದಿಕೊಂಡಂತೆ ಇನ್ನೂ ಎರಡೂವರೆ ಎಕರೆ ಜಾಗವಿದ್ದು, ಅಲ್ಲಿ ಮತ್ತೊಂದು ಕಟ್ಟಡ ನಿರ್ಮಿಸುವ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಬಹುದು. ಹೊಸದಾಗಿ ಐಟಿ ಪಾರ್ಕ್ ನಿರ್ಮಿಸುವ ಬದಲು ಈಗಿರುವ ಕಟ್ಟಡವನ್ನು ದುರಸ್ತಿಗೊಳಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಬೆಂಗಳೂರಿನ ಕಂಪನಿಗಳನ್ನು ಶಿವಮೊಗ್ಗದತ್ತ ಆಕರ್ಷಿಸಲು ಸರ್ಕಾರ ಮುಂದಾಗಬೇಕು. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಲು ಸಾಧ್ಯವಾಗದಿದ್ದರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಿಯೋನಿಕ್ಸ್ ಜಿಲ್ಲಾ ಸಂಸ್ಥೆಯ ವಹಿವಾಟು 2020–21ನೇ ಸಾಲಿನಲ್ಲಿ ವಾರ್ಷಿಕ ₹750 ಕೋಟಿಯಷ್ಟಿತ್ತು. ಆದರೆ, ಪ್ರಸ್ತುತ ಅದು ಸುಮಾರು ₹50 ಕೋಟಿಗೆ ಕುಸಿದಿದೆ. ಶಿವಮೊಗ್ಗ ಘಟಕವು 2013ರಿಂದ ಗಳಿಸಿದ ಆದಾಯದಲ್ಲಿ ₹2,42,12,000ವನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ. ಆದಾಯ ತಂದುಕೊಡುವ ಸಂಸ್ಥೆಯನ್ನೇ ಸಮರ್ಪಕವಾಗಿ ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಶಾಸಕ ಡಿ.ಎಸ್. ಅರುಣ್ ಬೇಸರ ವ್ಯಕ್ತಪಡಿಸಿದರು.
