ಶಿವಮೊಗ್ಗ : ಅರ್ಧ ಗಂಟೆಯಲ್ಲಿ ನೀರು ಬಿಡುತ್ತೇವೆ ಎಂದು ಹೇಳದಿದ್ದರೆ ಪರಿಸ್ಥಿತಿ ಕೈ ಮೀರುತ್ತೆ, ಸರ್ಕಾರದ ತೀರ್ಮಾನವನ್ನು ರೈತರು ಮಾಡ್ತಾರೆ: ಕೆ.ಟಿ. ಗಂಗಾಧರ್

ಹಂಚಿಕೊಳ್ಳಿ
WhatsApp Facebook X Telegram
Bhadra Dam Water Row
Bhadra Dam Water Row

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸುವಂತೆ ಇನ್ನು ಅರ್ಧ ಗಂಟೆಯಲ್ಲಿ ಆದೇಶ ಹೊರಡಿಸದೇ ಇದ್ದರೆ ಶಿವಮೊಗ್ಗದಲ್ಲಿ ಸಮಸ್ಯೆ ಕೈ ಮೀರುತ್ತದೆ. ನೀರಿನಲ್ಲಿ ರಾಜಕಾರಣ ಮಾಡಿದ ಸರ್ಕಾರ ಈ ಹಿಂದೆಯೂ ಉಳಿದಿಲ್ಲ, ಮುಂದೆಯೂ ಉಳಿಯುವುದಿಲ್ಲ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸುವಂತೆ ಆಗ್ರಹಿಸಿ ಇಂದು ಪುರಲೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಮೂಲಕ ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಟಿ. ಗಂಗಾಧರ್, ರಾಜ್ಯ ಸರ್ಕಾರ ಭದ್ರಾ ಜಲಾಶಯದ ನೀರಿನಲ್ಲಿ ರಾಜಕಾರಣ ಮಾಡುತ್ತಿದೆ. ಈ ರೀತಿ ರಾಜಕಾರಣ ಮಾಡಿದ ಸರ್ಕಾರ ರಾಜ್ಯದಲ್ಲಿ ಉಳಿದ ಇತಿಹಾಸವಿಲ್ಲ ಎಂದರು.

ಭದ್ರಾ ಜಲಾಶಯಕ್ಕೆ ಸಂಬಂಧಿಸಿದಂತೆ ನೀರು ಹರಿಸುವ ವಿಚಾರವಾಗಿ ಅನೇಕ ರಾಜಕಾರಣಿಗಳನ್ನು ಈಗಾಗಲೇ ಭೇಟಿ ಮಾಡಿ ಇಲ್ಲಿನ ಗಂಭೀರತೆಯನ್ನು ಹೇಳಿದ್ದೆವು. ಆದರೂ ಸಹ ಯಾವುದೇ ಉಪಯೋಗವಾಗಲಿಲ್ಲ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಬೇಕು, ಬಂದು ವರದಿ ನೀಡಬೇಕು ಮತ್ತು ರೈತರ ಹಿತ ಕಾಯಬೇಕು ಎಂದರು. 

ನೀರಿನ ತೀರ್ಮಾನದ ಮೂಲಕ ರೈತರು ಸರ್ಕಾರದ ತೀರ್ಮಾನವನ್ನು ಮಾಡುತ್ತಾರೆ

ರಾಜ್ಯ ಸರ್ಕಾರ ಈಗಾಗಲೇ ಈ ಹಿಂದೆ 10 ದಿನ ನೀರು ಬಿಡುವುದಾಗಿ ಘೋಷಿಸಿದ ತೀರ್ಮಾನವನ್ನು ಮುಂದುವರೆಸಬೇಕು. ಅಷ್ಟೇ ಅಲ್ಲದೆ ಇನ್ನು ಅರ್ಧ ಗಂಟೆಯಲ್ಲಿ ನೀರು ಬಿಡುತ್ತೇವೆ ಎಂದು ಘೋಷಿಸಬೇಕು. ಕೂಡಲೇ ಐಸಿಸಿ (ICC) ಮೀಟಿಂಗ್ ಕರೆಯಬೇಕು, ಆ ಮೀಟಿಂಗ್‌ನಲ್ಲಿ ಅಪ್ಪರ್ ತುಂಗಾದಿಂದ ನೀರನ್ನು ಹರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅದೇ ರೀತಿ ಕರ್ನಾಟಕ ನೀರಾವರಿ ನಿಗಮದಲ್ಲಿರುವ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿಸಲು ಹೊರಟಿರುವ ನಿರ್ಧಾರವನ್ನು ಕೈಬಿಡಬೇಕು. ನೀವು ನಿಮ್ಮ ಸರ್ಕಾರದೊಡನೆ ಮಾತನಾಡಿ, ನಾನು ನಮ್ಮ ರೈತರೊಡನೆ ಮಾತನಾಡುತ್ತೇನೆ. ನೀವು ನೀರು ಬಿಡುವುದರಿಂದ 4 ಜಿಲ್ಲೆಯ ಜನರು ತಮ್ಮ ಅಡಿಕೆ ತೋಟವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀರಿನ ವಿಚಾರದಲ್ಲಿ ಸರ್ಕಾರ ಹೇಗೆ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ರೀತಿ ಮುಂದಿನ ಬಾರಿ ಸರ್ಕಾರದ ತೀರ್ಮಾನವನ್ನು ನಾವು ಮಾಡುತ್ತೇವೆ. ನೀವು ನೀರು ಬಿಡುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಡಿಕೆ ಬೆಳೆಯಿಂದ ಅನೇಕ ರೈತರು ಜೀವನ ನಡೆಸುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸೇರಿದಂತೆ ಅನೇಕ ಕೆಲಸಗಳಿಗೆ ಉಪಯೋಗವಾಗುತ್ತದೆ. ಜಿಲ್ಲೆಯ ಆರ್ಥಿಕತೆಯಲ್ಲಿ ಅಡಿಕೆ ಬೆಳೆ ಪ್ರಮುಖ ಪಾತ್ರ ವಹಿಸಿದೆ. ಸಮಾಜವಾದಿ ನಾಯಕರಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರಂತಹ ರಾಜಕಾರಣಿಗಳಿದ್ದ ಈ ಜಿಲ್ಲೆಯಲ್ಲಿ ರೈತರನ್ನು ಸರ್ಕಾರ ಈ ಮಟ್ಟದಲ್ಲಿ ನಡೆಸಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಕೂಡಲೇ ರೈತರ ಸಮಸ್ಯೆ ಬಗೆಹರಿಸಿ ಎಂದರು.

ಟ್ರ್ಯಾಕ್ಟರ್ ಮೂಲಕ ಹಸಿರು ಬಣ್ಣದ ಬಾವುಟ ಹಿಡಿದು ಬಂದಿದ್ದ ನೂರಾರು ರೈತರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರು ಪ್ರತಿಭಟನಾ ಸ್ಥಳದಲ್ಲಿಯೇ ಮಲಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ಕಂಡುಬಂದವು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor