ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್ ಇನ್ಸ್ಪೆಕ್ಟರ್ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್ಪಿ ಶಾಂತರಾಜ್ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್, ಇಲ್ಲಿಯವರೆಗೂ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಹುಣಸೋಡು ಸ್ಫೋಟದ ಘಟನೆಯಂತಹ ಗಂಭೀರವಾದ ವಿಚಾರದಲ್ಲೂ, ತನಿಖೆ ಸರಿದಾರಿಯಲ್ಲಿ ಸಾಗುವಂತೆ ನೋಡಿಕೊಂಡು ಜವಾಬ್ದಾರಿ ಮೆರೆದಿದ್ದರು.
ಮುಂದಿನ ಎಸ್ಪಿ ಯಾರು?
ಎಸ್ಪಿ ಶಾಂತರಾಜ್ರವರನ್ನ ಬೆಂಗಳೂರಿಗೆ ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಇವರ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎಂ.ಲಕ್ಷ್ಮೀಪ್ರಸಾದ್ ರನ್ನ ವರ್ಗಾವಣೆ ಮಾಡಲಾಗಿದೆ. 2014 ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮೀ ಪ್ರಸಾದ್ ಬಿಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ 151 ನೇ ರ್ಯಾಂಕ್ ಪಡೆದು, ಐಪಿಎಸ್ ಹುದ್ದೆಗೆ ನೇಮಕಗೊಂಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ವಿಜಯಪುರದ ಎಸ್ಪಿಯಾಗಿ, ಬೆಂಗಳೂರಿನ ಇಂಟರ್ನಲ್ ಸೆಕ್ಯುರಿಟಿ ಎಸ್ಪಿಯಾಗಿ, ನಕ್ಸಲ್ ನಿಗ್ರಹದಳದ ಎಸ್ಪಿಯಾಗಿಯು ಕಾರ್ಯನಿರ್ವಹಿಸಿದ್ದಾರೆ.
