Jambagaru / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇತ್ತೀಚೆಗಷ್ಟೆ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ಪಾಲಿಕೆಯಲ್ಲಿ ಕಡತ ಪರಶೀಲನೆ ನಡೆಸಿದ್ರು. ಇದೀಗ ಸಾಗರ ನಗರಸಭೆಯಲ್ಲಿ ದಿಢೀರ್ ಪರಿಶೀಲನೆ ನಡೆಸಿರುವ ಬಗ್ಗೆ ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.
ಸಾಗರ ಪೇಟೆಯ ಜಂಬಗಾರಲ್ಲಿರುವ ಸರ್ವೇ ನಂ. 63ರ 4 ಎಕರೆ ಭೂಮಿ ಅನಧಿಕೃತವಾಗಿ ಖಾತೆಯಾಗಿರುವ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಸುಮೋಟೋ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಲೋಕಾಯುಕ್ತರು ನಗರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್, ನಗರಸಭೆ ವ್ಯಾಪ್ತಿಯ ಜಂಬಗಾರು ಬಡಾವಣೆಯ ಸರ್ವೇ ನಂ.63ರಲ್ಲಿ ಅಶ್ವತ್ಥನಾರಾಯಣ ಎಂಬ ಮೂಲ ವ್ಯಕ್ತಿಯ ಹೆಸರಿನಲ್ಲಿದ್ದ 4 ಎಕರೆ ಭೂಮಿಯನ್ನು ಶರಾವತಿ ಜನಾಭಿವೃದ್ಧಿ ಸಂಸ್ಥೆ ಹೆಸರಿಗೆ ರಿಜಿಸ್ಟರ್ ಆಗಿತ್ತು.. ಭೂಮಿ ಖಾಲಿ ಇರುವುದನ್ನು ಗಮನಿಸಿದ ಅನಿಲಕುಮಾರ್ ಎಂಬಾತ ತಮ್ಮ ಹೆಸರಿಗೆ ಅಶ್ವತ್ಥನಾರಾಯಣ ಜಿಪಿಎ ಮಾಡಿಕೊಟ್ಟಿದ್ದಾರೆಎಂದು ನಗರಸಭೆಗೆ ನಕಲಿ ದಾಖಲೆ ಕೊಟ್ಟು ನಿವೇಶನ ಮಾರಾಟ ಮಾಡಿದ್ದಾರೆ ಎಂದು ದೂರಿದೆ.
ಈ ಹಿನ್ನೆಲೆಯಲ್ಲಿ ನಿವೇಶನ ಆಕ್ರಮ ನಡೆದಿರುವ ಮಾಹಿತಿಯನ್ನು ಗಮನಿಸಿ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೀಗ ಅಗತ್ಯ ಮಾಹಿತಿ ಕಲೆಹಾಕಲು ಸೋಮವಾರ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು. ಇನ್ನೂ ಈ ಪರಿಶೀಲನೆ ವೇಳೆ ಇನ್ಸ್‌ಪೆಕ್ಟರ್ ರುದ್ರೇಶ್, ವೀರಬಸಪ್ಪ, ಸಿಬ್ಬಂದಿಗಳಾದ ಟೀಕಪ್ಪ , ಮಂಜುನಾಥ್, ಸುರೇಂದ್ರ, ಆದರ್ಶ, ಚಂದ್ರಿಬಾಯಿ, ಅಂಜಲಿ, ಚೇತನ್, ಆನಂದ್ ಇದ್ದರು.
