SHIVAMOGGA NEWS TODAY

ಶಿವಮೊಗ್ಗದಲ್ಲಿ ಮತ್ತೊಂದು ಬೇಲೆಕೇರಿ ಮಾದರಿ ಮರಳು ಹಗರಣದ ಶಂಕೆ: ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga ಶಿವಮೊಗ್ಗ : ರಾಜ್ಯದಲ್ಲಿ ಹಿಂದೆ ಸಂಚಲನ ಸೃಷ್ಟಿಸಿದ್ದ ಬೇಲೆಕೇರಿ ಅದಿರು ಹಗರಣದ ಮಾದರಿಯಲ್ಲೇ, ಶಿವಮೊಗ್ಗ ಜಿಲ್ಲೆಯಲ್ಲೂ ಬೃಹತ್ ಮರಳು ಹಗರಣ ನಡೆಯುತ್ತಿದೆಯೇ? ಇದಕ್ಕೆ ಇಲ್ಲಿನ ಭ್ರಷ್ಟ ಅಧಿಕಾರಿಗಳು ಮತ್ತು ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆಯೇ? ಎಂಬ ಬಲವಾದ ಅನುಮಾನ ಮೂಡುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ನೇರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ಸಕ್ರಿಯವಾಗಿವೆ ಎಂದು ಸಾರ್ವಜನಿಕರು ಭಾವಿಸಿದ್ದಾರೆ. ಆದರೆ, ಇತ್ತೀಚಿನ ವಿದ್ಯಮಾನಗಳು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಹರಾಜು ಹಾಕುತ್ತಿವೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ 2025ರ ಜುಲೈ 1 ರಂದು ಜಿಲ್ಲೆಯ 25 ಮರಳು ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಬರೋಬ್ಬರಿ 11 ತಿಂಗಳು ಕಳೆದರೂ ಯಾರಿಗೂ ಟೆಂಡರ್ ಹಂಚಿಕೆಯಾಗಿಲ್ಲ. ಸರ್ಕಾರದ ಅಧಿಕೃತ ವ್ಯವಸ್ಥೆಯಲ್ಲಿ ಮರಳು ಸಿಗದೇ ಇದ್ದಾಗ ಸಹಜವಾಗಿಯೇ ಅಕ್ರಮ ಮರಳು ಸಂಗ್ರಹ ಮತ್ತು ಎಗ್ಗಿಲ್ಲದ ಸಾಗಣೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮರಳು ಸಾಗಣೆಯಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ. ಇಲ್ಲಿನ ಗಣಿ ಇಲಾಖೆ ಅಧಿಕಾರಿಗಳೇ ಅಕ್ರಮ ದಂಧೆಕೋರರೊಂದಿಗೆ ಕೈಜೋಡಿಸಿದ್ದಾರೆ. ಕ್ವಾರಿ ಮಾಲೀಕರಿಂದ ಲಕ್ಷಾಂತರ ರೂಪಾಯಿ ಲಂಚದ ಆಮಿಷವಿರುವುದರಿಂದ, ಅಧಿಕಾರಿಗಳಿಗೆ ಅಕ್ರಮ ಮರಳುಗಾರರೇ ಅತ್ಯಂತ ಆಪ್ತರಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಬರೋಬ್ಬರಿ 37 ಸಾವಿರ ಮೆಟ್ರಿಕ್ ಟನ್ ಅಕ್ರಮ ಮರಳು ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿಯಾಗಿದ್ದು, ಮಾನ್ಸೂನ್ (ಮಳೆಗಾಲ) ಆರಂಭವಾದರೆ ಇದರ ಬೆಲೆ ದುಪ್ಪಟ್ಟಾಗಲಿದೆ. ಆದರೆ, ಲೋಕಾಯುಕ್ತರು ಇನ್ನೂ ಹಲವು ಅಕ್ರಮ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸುವುದೇ ಬಾಕಿ ಉಳಿದಿದೆ.

ಬೇಲೆಕೇರಿ ಬಂದರಿನಲ್ಲಿ ವಶಪಡಿಸಿಕೊಂಡಿದ್ದ ಅದಿರು ಮಾಯವಾದ ಮಾದರಿಯಲ್ಲೇ, ಶಿವಮೊಗ್ಗದಲ್ಲಿ ಲೋಕಾಯುಕ್ತರು ಜಪ್ತಿ ಮಾಡಿರುವ 37 ಸಾವಿರ ಮೆಟ್ರಿಕ್ ಟನ್ ಮರಳು ಕೂಡ ರಕ್ಷಣೆ ಇಲ್ಲದೆ ರಾತ್ರೋರಾತ್ರಿ ಖಾಲಿಯಾಗುತ್ತಿದೆ! ಅಕ್ರಮ ಸಂಗ್ರಹಕಾರರೇ ಈ ಮರಳಿಗೆ ಕಾವಲು ಕಾಯುತ್ತಿರುವುದು ದುರಂತ. ಇನ್ನು ಕೆಲವು ಭ್ರಷ್ಟ ಅಧಿಕಾರಿಗಳು, ಈ ಮರಳನ್ನು ಸರ್ಕಾರಿ ಕೆಲಸಕ್ಕೆ ಬಳಸಲಾಗುತ್ತಿದೆ ಎಂಬ ಸುಳ್ಳು ನೆಪವೊಡ್ಡಿ ಇಡೀ ಮರಳನ್ನು ಅಲ್ಲಿಂದಲೇ ಖಾಲಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳೇ ಜಿಲ್ಲಾ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಿರಿಯ ಗಣಿ ಅಧಿಕಾರಿಗಳಿಗೆ ದಾಳಿ ನಡೆಸಲು ಹಿರಿಯ ಅಧಿಕಾರಿಗಳು ವಾಹನವನ್ನೇ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರು ಬರುವ ಮೊದಲೇ ಈ ಕೋಟ್ಯಂತರ ರೂ. ಮೌಲ್ಯದ ಮರಳನ್ನು ಲೂಟಿ ಮಾಡಲು ಮಾಫಿಯಾ ಸಜ್ಜಾಗಿದೆ ಎಂದು ಎಚ್ಚರಿಸಿದರು.

Shivamogga KB Prasanna Alleges Huge Sand Scam  

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.