ಖರೀದಿಸಿದ ಒಂದೇ ತಿಂಗಳಿಗೆ ಕೆಟ್ಟ ಮೊಬೈಲ್:  1650 ರೂಪಾಯಿ ಮೊಬೈಲ್​ಗೆ ಕೋರ್ಟ್​ ವಿಧಿಸಿದ ದಂಡವೆಷ್ಟು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ

ಶಿವಮೊಗ್ಗ ಮಲೆನಾಡುಟುಡೆ ಸುದ್ದಿ : ದೋಷಯುಕ್ತ ಮೊಬೈಲ್ ಫೋನ್ ಮಾರಾಟ ಮಾಡಿ ಸೇವಾ ನ್ಯೂನತೆ ಎಸಗಿದ ಮೊಬೈಲ್ ಕಂಪನಿ ಹಾಗೂ ಸ್ಥಳೀಯ ಮಳಿಗೆಗೆ, ಗ್ರಾಹಕನಿಗೆ ಮೊಬೈಲ್ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಹಾಗೂ 15,000 ರೂಪಾಯಿ ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ

ಶಿವಮೊಗ್ಗದ ಗೋಪಾಳ ನಿವಾಸಿ ಮಂಜುನಾಥ ಜೆ.ವಿ. ಅವರು ನಗರದ ನೆಹರು ರಸ್ತೆಯಲ್ಲಿರುವ ಮೊಬೈಲ್​ ಅಂಗಡಿಯೊಂದರಲ್ಲಿ  1,650 ರೂ. ನೀಡಿ ಐಟೆಲ್ ಪಿ 450 (Itel P450) ಮೊಬೈಲ್ ಖರೀದಿಸಿದ್ದರು. ಖರೀದಿಸಿದ ಒಂದೇ ತಿಂಗಳಿನಲ್ಲಿ ಮೊಬೈಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮಾರಾಟಗಾರರು ಚಾರ್ಜರ್ ಬದಲಾಯಿಸಿಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಬಳಿಕ 2026ರ ಫೆಬ್ರವರಿ 27ರಂದು ಗ್ರಾಹಕರು ಲಿಖಿತ ಮನವಿ ನೀಡಿದ್ದರೂ ಕಂಪನಿ ಹಾಗೂ ಮಾರಾಟಗಾರರು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರು.

ಇದರಿಂದ ಆಕ್ರೋಶಗೊಂಡ ಗ್ರಾಹಕರು ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗದ ಬಾಗಿಲು ತಟ್ಟಿದ್ದರು. ಆಯೋಗ ನೋಟಿಸ್ ಜಾರಿಗೊಳಿಸಿದರೂ ಎದುರುದಾರರು ಆಯೋಗದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಏಕಪಕ್ಷೀಯ ವಿಚಾರಣೆ ನಡೆಸಲಾಯಿತು.

ಗ್ರಾಹಕ ಆಯೋಗ ನೀಡಿದ ಆದೇಶ

ದೂರುದಾರರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಸೇವಾ ನ್ಯೂನತೆಯನ್ನು ಎತ್ತಿಹಿಡಿದು ಈ ಕೆಳಗಿನಂತೆ ಆದೇಶ ಹೊರಡಿಸಿದೆ:

ಮೊಬೈಲ್‌ನ ಮೂಲ ಬೆಲೆ 1,650 ರೂ.ಗಳನ್ನು ಫೆಬ್ರವರಿ 27, 2026 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 7ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಬೇಕು.

ಸೇವೆಯಲ್ಲಿನ ನ್ಯೂನತೆಯಿಂದ ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗೆ 5,000 ರೂ. ನಷ್ಟಪರಿಹಾರ ನೀಡಬೇಕು.

ದೂರಿನ ಕಾನೂನು ಖರ್ಚು-ವೆಚ್ಚವಾಗಿ 10,000 ರೂ.ಗಳನ್ನು ಪಾವತಿಸಬೇಕು.

ನಿಗದಿತ 45 ದಿನಗಳೊಳಗೆ ಈ ಮೊತ್ತವನ್ನು ನೀಡಲು ವಿಫಲವಾದರೆ ಶೇ. 10ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕಾಗುತ್ತದೆ.

ದೂರುದಾರರು ಆದೇಶವಾದ 45 ದಿನಗಳೊಳಗೆ ದೋಷಯುಕ್ತ ಮೊಬೈಲ್ ಅನ್ನು ಎದುರುದಾರರಿಗೆ ಹಸ್ತಾಂತರಿಸಬೇಕು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor