ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಗಣೇಶಚತುರ್ಥಿ ಬರುವಾಗಲೇ, ಆತನಿಗಿಂತಲೂ ಮೊದಲು ಒಂದಿಷ್ಟು ಗಾಳಿ ಸುದ್ದಿಗಳು ಹರಿದಾಡುತ್ತವೆ. ಆ ಪೈಕಿ ಕೆಟ್ಟಸುದ್ದಿಗಳೇ ಹೆಚ್ಚಿರುತ್ತದೆ. ಪ್ರತಿವರ್ಷದಂತೆ ಈ ವರುಷವೂ ಒಂದು ಗಾಳಿ ಸುದ್ದಿ ಹರಡುತ್ತಿದೆ ಅಥವಾ ಹರಿಬಿಡಲಾಗುತ್ತಿದೆ. ಶಿವಮೊಗ್ಗದಲ್ಲಿ ಗಣಪತಿ ಕೂರಿಸೋಕೆ ಫೀಜ್ ಪಡೆಯುಲಾಗುತ್ತಿದೆ. ಅದಕ್ಕಾಗಿ ಈ ಸಲ ಮಕ್ಕಳುಗಳು ಗಣಪತಿ ಕೂರಿಸಲಾಗುತ್ತಿಲ್ಲ. ಗಣಪತಿ ಕೂರಿಸೋಕೆ 2500 ರೂಪಾಯಿ ಫೀಜ್ ಕಟ್ಟಬೇಕಂತೆ ಇದು ದುಬಾರಿಯಾಗಿದೆ ಅನ್ನುವ ಕಾರಣಕ್ಕೆ ಗಣಪತಿ ಕೂರಿಸುವದನ್ನೆ ಮಕ್ಕಳು ಬಿಡುತ್ತಿದ್ದಾರೆ ಎಂದು ದೊಡ್ಡವರು ಚರ್ಚೆಮಾಡುತ್ತಿದ್ದಾರೆ ಎಂಬುದು ಗಾಳಿ ಸುದ್ದಿಯ ವಿಸ್ತೃತ ರೂಪ. ಇಂತಹ ಗಾಳಿ ಸುದ್ದಿಯನ್ನು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಶಿವಮೊಗ್ಗದಲ್ಲಿ ವಿವಿಧೆಡೆ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆಗೆ 2500 ಶುಲ್ಕವನ್ನು ಪಾವತಿಸಬೇಕು ಎಂಬ ವದಂತಿ ಹರಡಲಾರಂಭಿಸಿದೆ. ದೇವಾಲಯಗಳಲ್ಲಿಯೂ ಸಹ ಈ ಚರ್ಚೆ ನಡೆದು ಮಲೆನಾಡು ಟುಡೆಯ ಕಿವಿಗೂ ಈ ಗಾಳಿ ಸುದ್ದಿ ಬಿದ್ದ ಹಿನ್ನೆಲೆಯಲ್ಲಿ ನಮ್ಮ ಪ್ರತಿನಿಧಿ ಪ್ರತಾಪ್ ತೀರ್ಥಹಳ್ಳಿ, ಅವರಿವರನ್ನ ಕೇಳಿದ್ರೆ ಪ್ರಯೋಜನ ಇಲ್ಲ ಎಂದು ನೇರವಾಗಿ ಪಾಲಿಕೆ ಆಯುಕ್ತರಿಗೆ ಫೋನಾಯಿಸಿ,, ಏನ್..ಸರ್ ಹೀಗಂತೆ ಹೌದಾ..ಗಾಳಿ ಸುದ್ದಿ ನಿಮ್ಮ ಕಿವಿಗೂ ಬಿದ್ದಿದ್ದಿಯಾ ಅಂತಾ ಕೇಳಿದ್ದರು.
ಈ ಕುರಿತು ಮಲೆನಾಡು ಟುಡೆಗೆ ಪ್ರತಿಕ್ರಿಯೆ ನೀಡಿದ ಮಾಯಣ್ಣ ಗೌಡರು, ಆಥರದ್ದು ಏನೂ ಸಹ ಇಲ್ಲ. ಹಬ್ಬ ಬಂತು ಎಂದಾಗ, ದಾರಿ ತಪ್ಪಿಸುವ ಸುದ್ದಿಗಳು ಬರುವುದು ಸಹಜ. ಅಂತಹ ಸುಳ್ಳು ಸುದ್ದಿಗಳಲ್ಲಿ ಇದು ಸಹ ಒಂದು ಎಂದಿದ್ದಾರೆ. ಅಲ್ಲದೆ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಪಷ್ಟನೆಯೊಂದನ್ನು ನೀಡುತ್ತೇನೆ ಎಂದ ಮಾಯಣ್ಣ ಗೌಡರು ಇದು ಸುಳ್ಳು ಸುದ್ದಿ. ಸಾರ್ವಜನಿಕರು ಇಲ್ಲಸಲ್ಲದ ಮಾತುಗಳಿಗೆ ಕಿವಿಗೊಡಬಾರದು , ನಾವು ಮಹಾನಗರ ಪಾಲಿಕೆ ವತಿಯಿಂದ ಒಂದು ರೂಪಾಯಿ ಶುಲ್ಕವನ್ನೂ ಪಡೆಯುತ್ತಿಲ್ಲ. ಶಾಂತಿ ಸೌಹಾರ್ದ ಸಭೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ,ಯಾವುದೇ ಶುಲ್ಕವನ್ನ ವಸೂಲಿ ಮಾಡುತ್ತಿಲ್ಲ ಎಂಧಿದ್ದಾರೆ.
ಇದೇ ವೇಳೆ ಪ್ಲೆಕ್ಸ್ ವಿಚಾರದಲ್ಲಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಆದರೆ ಯಾರು ತಮ್ಮ ಸ್ವಂತ ಜಾಗದಲ್ಲಿ ಫ್ಲೆಕ್ಸ್ ಅಳವಡಿಸುತ್ತಾರೋ ಅವರ ಬಳಿ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವ ಫ್ಲೆಕ್ಸ್ ನಿಯಮಗಳ ಪ್ರಕಾರ ಪಾಲಿಕೆಗೆ ನಿಗದಿತ ಶುಲ್ಕ ಕಟ್ಟಬೇಕಾಗುತ್ತದೆ. ಅದನ್ನು ಹೊರತುಪಡಿಸಿ, ಬೇರೆ ಯಾರಾದರೂ ಪಾಲಿಕೆಯವರೆಂದು ಹೇಳಿಕೊಂಡು ಬಂದು ಶುಲ್ಕ ಕೇಳಿದರೆ ಮೋಸ ಹೋಗಬೇಡಿ ಎಂದು ಮಾಹಿತಿ ನೀಡಿದರು. ಮುಂದುವರಿದು, ಮೆಸ್ಕಾಂ ಸೇರಿದಂತೆ ಇನ್ನಿತರ ಇಲಾಖೆಗಳು ವಿದ್ಯುತ್ ಹಾಗೂ ಇತರೆ ವಿಚಾರವಾಗಿ ಶುಲ್ಕ ಸಂಗ್ರಹಿಸುತ್ತಿದ್ದರೆ ಅದು ನಮಗೆ ತಿಳಿದಿಲ್ಲ ಎಂದರು.
ಶಿವಮೊಗ್ಗದ ನ್ಯೂಮಂಡ್ಲಿ, ರೈಲ್ವೇ ನಿಲ್ದಾಣ ಮತ್ತು ಗೋಪಾಳದ ಮೆಸ್ಕಾಂ ಕಚೇರಿಗಳಲ್ಲಿ ಏಕ-ಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕರಿಗೆ ಅನುಮತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಈ ಕೇಂದ್ರಗಳನ್ನು ಆರಂಭಿಸಿವೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಈ ಏಕ-ಗವಾಕ್ಷಿ ಕೇಂದ್ರದಿಂದ ಅನುಮತಿ ಪಡೆದೇ ಹಬ್ಬವನ್ನು ಆಚರಿಸಬೇಕಾಗುತ್ತದೆ ಎಂದು ತಿಳಿಸಿದರು.
