ಮಲೆನಾಡು ಟುಡೆ ಸುದ್ದಿ / ಶಿರಾಳಕೊಪ್ಪ / ಶಿರಾಳಕೊಪ್ಪದಿಂದ ಸೊರಬಕ್ಕೆ ತೆರಳುತ್ತಿದ್ದ ವೇಳೆ ಛತ್ರದಹಳ್ಳಿ ಸಮೀಪ ಕಳೆದ ಸೋಮವಾರ ನಡೆದಿದ್ದ ಘಟನೆಯೊಂದರ ಬಗ್ಗೆ ತಡವಾಗಿ ಮಾಹಿತಿ ಲಭಿಸಿದೆ. ಕಳೆದ ಸೋಮವಾರ ನಿಯಂತ್ರಣ ತಪ್ಪಿದ ಕಾರೊಂದು ಇಲ್ಲಿಗೆ ಕೆರೆಗೆ ಬಿದ್ದಿದ್ದು, ಆ ಕಾರಿನಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರನ್ನ ಅಲ್ತಾಫ್ ಎಂಬುವವರು ನೀರಿಗೆ ಹಾರಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಸೊರಬ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಎಸ್. ಕೊಟ್ರೇಶ್ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡೆದ ಘಟನೆಯನ್ನ ಗಮನಿಸುವುದಾದರೆ, ಅಂದು ಸೋಮವಾರ, ಎದುರಿನಿಂದ ಬರುತ್ತಿದ್ದ ಲಾರಿಗೆ, ತಮ್ಮ ಕಾರು ಡಿಕ್ಕಿ ಆಗುವುದನ್ನ ತಪ್ಪಿಸುವ ಸಂದರ್ಭದಲ್ಲಿ ಕಂಟ್ರೋಲ್ ತಪ್ಪಿ ಕಾರು ಇನ್ನೊಂದು ಬದಿಗೆ ವಾಲಿದೆ. ಅಷ್ಟೆಅಲ್ಲದೆ ಸೀದಾ ಕೆರೆಗೆ ಉರುಳಿದೆ. ಹೀಗೆ ಉರುಳಿದ ಕಾರು, ಕೆರೆಯಲ್ಲಿ ತಲೆಕೆಳಗಾಗಿ ಬಿದ್ದಿದ್ದರಿಂದ, ವಾಹನ ಚಲಾಯಿಸುತ್ತಿದ್ದ ಎಸ್. ಕೊಟ್ರೇಶ್ ಡ್ರೈವರ್ ಸೀಟ್ನಲ್ಲಿಯೇ ಸಿಲುಕಿದ್ದರು, ಅಲ್ಲದೆ ಪೆಟ್ಟುಬಿದ್ದಿದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಇದೇ ವೇಳೆ ಶಬ್ಧ ಬಂದಿದ್ದನ್ನ ಗಮನಿಸಿದ ಅಲ್ಲಿಯೇ ಇದ್ದ ಅಲ್ತಾಫ್ ಸೀದಾ ಹೋಗಿ ಕೆರೆಗೆ ಹಾರಿದ್ದಾರೆ. ತಲೆಕೆಳಗಾಗಿ ಬಿದ್ದಿದ್ದ ಕಾರಿನ ಡೋರ್ ತೆರೆದು ಒಳಗಿದ್ದ ಎಸ್. ಕೊಟ್ರೇಶ್ ಅವರನ್ನು ಹೊರಗೆ ಎಳೆದಿದ್ದಾರೆ. ಬಳಿಕ ದಡಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
