ಕುವೆಂಪು ವಿಶ್ವವಿದ್ಯಾಲಯದಲ್ಲಿ UUCMS ಅಂಕ ಬದಲಾವಣೆ ಆರೋಪ; ಆಡ್ಮಿನ್, ವಿದ್ಯಾರ್ಥಿ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್

ಹಂಚಿಕೊಳ್ಳಿ
WhatsApp Facebook X Telegram
Kuvempu University UUCMS Marks Tampering Allegation FIR Against Admin and Student
Kuvempu University UUCMS Marks Tampering Allegation FIR Against Admin and Student

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕುವೆಂಪು ವಿಶ್ವವಿದ್ಯಾಲಯದ UUCMS ಪೋರ್ಟಲ್‌ನಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಯ ಅಂಕಗಳನ್ನು ಅನುಮತಿ ಇಲ್ಲದೆ ಬದಲಾಯಿಸಿ ಉತ್ತೀರ್ಣ ಎಂದು ಫಲಿತಾಂಶ ಪ್ರಕಟಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ UUCMS ಆಡ್ಮಿನ್ ಅನುಷಾ ಹಾಗೂ ವಿದ್ಯಾರ್ಥಿ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 10ರಂದು ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ 316(4), 318(4), 336(2), 340(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(C), 66(D) ಅಡಿಯಲ್ಲಿ ಈ ಕೇಸ್​ ದಾಖಲಾಗಿದೆ.

ಎಫ್‌ಐಆರ್ ಪ್ರಕಾರ, ಕುವೆಂಪು ವಿಶ್ವವಿದ್ಯಾಲಯದ MBA ವಿಭಾಗದ ಅತಿಥಿ ಉಪನ್ಯಾಸಕಿ ಟೀನಾ ಕುಮಾರಿ ಬಿ.ಎಸ್. ಅವರು UUCMS ಆಡ್ಮಿನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಷಾ ವಿರುದ್ಧ ದೂರು ನೀಡಿದ್ದರು. ಇವರು ಕೆಲವು ವಿದ್ಯಾರ್ಥಿಗಳಿಗೆ ಹಣದ ಆಮಿಷವೊಡ್ಡಿದ್ದರು ಎಂದು ದೂರಿದ್ದರು. ಅಲ್ಲದೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಒಂದು ವಿಷಯವನ್ನು ಪಾಸ್ ಮಾಡಲು ₹10,000ರಂತೆ, 5 ವಿಷಯಗಳಿಗೆ ₹50,000 ಪಡೆದಿದ್ದಾರೆ ಎಂಬ ಆರೋಪಿಸಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ನಿರ್ದೇಶಿಸಿದ್ದರು.

ಅದರಂತೆ ಪ್ರೊ. ಆರ್. ತಿಮ್ಮರಾಯಪ್ಪ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಪೊಲೀಸ್ ದಾಖಲೆಯ ಪ್ರಕಾರ, ಶಿವಮೊಗ್ಗದ ಕಾಲೇಜು ಒಂದರ, 5ನೇ ಸೆಮಿಸ್ಟರ್ ವಿದ್ಯಾರ್ಥಿ ಒಬ್ಬರು ನವೆಂಬರ್-ಡಿಸೆಂಬರ್ 2025ರ ನಿಯಮಿತ ಪರೀಕ್ಷೆ ಬರೆದಿದ್ದರು. Subject Code 31507 , Subject Code 31508 ವಿಷಯಗಳಲ್ಲಿ ಅವರು ಅನುತ್ತೀರ್ಣರಾಗಿದ್ದರು. ಈ ಫಲಿತಾಂಶವು 2026ರ ಏಪ್ರಿಲ್ 20ರಂದು ಪ್ರಕಟವಾಗಿತ್ತು.

ವಿದ್ಯಾರ್ಥಿ ತಾನು ಅನುತ್ತೀರ್ಣಗೊಂಡಿದ್ದ ಈ ವಿಷಯಗಳಿಗೆ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರಲಿಲ್ಲ. ಆದರೂ 2026ರ ಜೂನ್ 22ರಂದು ವಿಶ್ವವಿದ್ಯಾಲಯದ UUCMS ಪೋರ್ಟಲ್‌ನಲ್ಲಿ ಇದೇ ವಿಷಯಗಳಲ್ಲಿ ವಿದ್ಯಾರ್ಥಿ ಉತ್ತೀರ್ಣ ಎಂದು ಫಲಿತಾಂಶ ಪ್ರಕಟವಾಗಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಎಫ್‌ಐಆರ್ ಹೇಳುತ್ತದೆ.

ಈ ವಿಷಯಗಳ ಅಂಕಗಳನ್ನು UUCMS ಆಡ್ಮಿನ್ ಆಗಿದ್ದ ಅನುಷಾ ಅವರು ದೂರುದಾರರಾದ ಪ್ರೊ. ಆರ್. ತಿಮ್ಮರಾಯಪ್ಪ ಅವರ ಯಾವುದೇ ಪೂರ್ವಾನುಮತಿ ಪಡೆಯದೆ, ಅವರ ಗಮನಕ್ಕೂ ತರದೆ, ಅವರ DSC (Digital Signature Certificate) Keyಗೆ ಸಂಬಂಧಿಸಿದ One Day Password ಬಳಸಿಕೊಂಡು ಬದಲಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎಫ್‌ಐಆರ್‌ನಲ್ಲಿ ಅನುಷಾ ಅವರನ್ನು A1 ಹಾಗೂ ವಿದ್ಯಾರ್ಥಿಯನ್ನು A2 ಎಂದು ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಕೈಗೊಂಡಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಅವುಗಳ ಸತ್ಯಾಸತ್ಯತೆ ತನಿಖೆಯಿಂದ ನಿರ್ಧಾರವಾಗಬೇಕಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor