ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದುಬಾರೆ ಆನೆ ಬಿಡಾರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಸಕ್ರೆಬೈಲು ಆನೆ ಬಿಡಾರವನ್ನು ಸೆಪ್ಟೆಂಬರ್ 26ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅಧಿಕೃತವಾಗಿ ಪುನರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದ್ದು, ಅದರ ವಿವರ ಹೀಗಿದೆ.
ಏಪ್ರಿಲ್ 18, 2026ರಂದು ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದ ಆಕಸ್ಮಿಕ ದುರ್ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅರಣ್ಯ ಸಚಿವರು ಸೂಚಿಸಿದ್ದರು.
ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡ ನಂತರವಷ್ಟೇ ಆನೆ ಶಿಬಿರಗಳನ್ನು ಪುನರಾರಂಭಿಸುವಂತೆ ನಿರ್ದೇಶಿಸಲಾಗಿತ್ತು.
ಅರಣ್ಯ ಇಲಾಖೆ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳ ಅನ್ವಯ ಸಕ್ರೆಬೈಲು ಆನೆ ಬಿಡಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಾರ್ವಜನಿಕರು ಮತ್ತು ಆನೆಗಳು ಸಂಚರಿಸಲು ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ.
ಸಾರ್ವಜನಿಕರು ಹಾಗೂ ಆನೆಗಳ ನಡುವೆ ನೇರ ಸಂಪರ್ಕ ಉಂಟಾಗದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಹಾಗೂ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಬಿಡಾರದ ವಿವಿಧೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಎಲ್ಲ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಿಂದ ಸಕ್ರೆಬೈಲು ಆನೆ ಬಿಡಾರವನ್ನು ಸಾರ್ವಜನಿಕರ ಪ್ರವೇಶಕ್ಕೆ ಪುನರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
