Ravi Belagere ಶಿವಮೊಗ್ಗ : ಇತ್ತೀಚೆಗೆ ಕನ್ನಡ ಪುಸ್ತಕದ ಲೋಕದಲ್ಲಿ ಒಂದು ವಿಚಿತ್ರ ಗಾಳಿ ಬೀಸುತ್ತಿದೆ. ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ ಎಂಬ ಕಾದಂಬರಿಯನ್ನು ಹಿಡಿದುಕೊಂಡು ಹೊಸ ತಲೆಮಾರಿನ ಹುಡುಗರು ಬೀದಿಬೀದಿಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿರುವುದನ್ನು ನೋಡಿದರೆ, ಸಾಹಿತ್ಯವೆಂಬುದು ಈಗ ಒಂದು ‘ಫ್ಯಾಷನ್ ಸ್ಟೇಟ್‌ಮೆಂಟ್’ ಆಗಿ ಬದಲಾದಂತೆ ಕಾಣುತ್ತಿದೆ. ಇದು ಪಬ್ಲಿಸಿಟಿ ರೀಡಿಂಗ್ ಅಷ್ಟೇ ಅಲ್ಲ, ಒಂದು ರೀತಿಯ ಸಾಮೂಹಿಕ ಉನ್ಮಾದವೂ ಹೌದು.
ದಿಢೀರ್ ಎಪಿಎಲ್ ಆಗ್ತೀವೆ ಬಿಪಿಎಲ್ ಕಾರ್ಡ್! ಇದೆಂಥಾ ತಲೆನೋವು
ನೋಡಿ, ಸೃಜನಶೀಲ ಸಾಹಿತ್ಯವನ್ನ ಓದುವುದು ಅಂದರೆ ಅದು ಅಂತರಂಗದ ಸಂವಾದವಾಗಬೇಕು. ಆದರೆ ಇಂದಿನ ಇನ್‌ಸ್ಟಾಗ್ರಾಮ್ ಕಾಲದಲ್ಲಿ ಪುಸ್ತಕ ಓದುವುದು ಅಂದರೆ ಅದೊಂದು ‘ಸ್ಟೇಟಸ್ ಸಿಂಬಲ್’ ಆಗಿಹೋಗಿದೆ. ಯಾವುದೋ ಒಂದು ಪುಸ್ತಕದ ಕೆಲವು ರಂಜನೀಯ ಸಾಲುಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಿದ ತಕ್ಷಣ, ಅದರ ಮೇಲೆ ಎಲ್ಲರೂ ಮುಗಿಬೀಳುತ್ತಾರೆ. ಈ ಪಬ್ಲಿಸಿಟಿಯ ಅಬ್ಬರಕ್ಕೆ ಮಾರುಕಟ್ಟೆಯಲ್ಲಿ ಅದರ ಡೂಪ್ಲಿಕೇಟ್ ಪ್ರತಿಗಳೂ ಹುಟ್ಟಿಕೊಂಡಿವೆ ಅಂದರೆ, ಇಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ‘ಕಮೊಡಿಟಿ’ (ಸರಕು) ಮಾರಾಟವಾಗುತ್ತಿದೆ ಎಂಬುದು ಸ್ಪಷ್ಟ.
ಇದೇ ಹೊತ್ತಿನಲ್ಲಿ ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯೆಂದರೆ—’ಹೇಳಿ ಹೋಗು ಕಾರಣ’ದಷ್ಟೇ ಸತ್ವವಿರುವ, ಅಥವಾ ಅದಕ್ಕಿಂತಲೂ ಗಂಭೀರವಾದ ನೂರಾರು ಕಾದಂಬರಿಗಳು ಕಪಾಟಿನ ಮೂಲೆಯಲ್ಲಿ ಧೂಳು ಹಿಡಿಯುತ್ತಿವೆ ಏಕೆ?
ಇದಕ್ಕೆ ಕಾರಣ ನಮ್ಮ ಓದುಗರ ಅಭಿರುಚಿ ಮತ್ತು ಈ ಮಾರುಕಟ್ಟೆಯ ತಂತ್ರಗಾರಿಕೆ. ರವಿ ಬೆಳಗೆರೆಯವರ ಬರಹದಲ್ಲಿ ಒಂದು ತರಹದ ‘ಸೆಡಕ್ಟಿವ್’ ಗುಣವಿತ್ತು. ಅದು ಓದುಗನ ಭಾವನೆಗಳನ್ನು ಅತಿ ಸುಲಭವಾಗಿ ತಲುಪುತ್ತಿತ್ತು. ಆದರೆ ಗಂಭೀರವಾದ ಕಾದಂಬರಿಗಳು ಓದುಗನಿಂದ ಸ್ವಲ್ಪ ತಾಳ್ಮೆಯನ್ನು, ಸ್ವಲ್ಪ ಮೆದುಳಿನ ಕಸರತ್ತನ್ನು ಬಯಸುತ್ತವೆ. ಇಂದಿನ ಈ ವೇಗದ ಜಗತ್ತಿನಲ್ಲಿ ಯಾರಿಗೂ ತಾಳ್ಮೆಯಿಲ್ಲ. ಎಲ್ಲರಿಗೂ ಇನ್‌ಸ್ಟೆಂಟ್ ಕಾಫಿಯಂತೆ ಇನ್‌ಸ್ಟೆಂಟ್ ಫೀಲಿಂಗ್ ಕೊಡುವ ಸಾಹಿತ್ಯ ಬೇಕಾಗಿದೆ.
ಈ ‘ವೈರಲ್’ ಸಂಸ್ಕೃತಿಯಿಂದಾಗಿ ಸಾಹಿತ್ಯವೆಂಬುದು ಕೇವಲ ಕೆಲವೇ ಕೆಲವು ಲೇಖಕರ ಅಥವಾ ಪುಸ್ತಕಗಳ ಸುತ್ತ ಸುತ್ತುತ್ತಿದೆ. ಪಬ್ಲಿಸಿಟಿ ಎಂಬುದು ಒಂದು ದೊಡ್ಡ ‘ಆವರಣ’ವನ್ನು ಸೃಷ್ಟಿಸಿಬಿಡುತ್ತದೆ. ಆ ಆವರಣದ ಒಳಗಿರುವ ಪುಸ್ತಕ ಮಾತ್ರ ನಮಗೆ ಕಾಣಿಸುತ್ತದೆ. ಅದರ ಆಚೆಗಿರುವ ಶ್ರೀಮಂತ ಸಾಹಿತ್ಯ ಲೋಕ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಇದು ಪ್ರಕಾಶಕರಿಗೂ ಗೊತ್ತು. ಅವರು ಯಾವುದಕ್ಕೆ ಬೇಡಿಕೆ ಇದೆಯೋ ಅದನ್ನೇ ಹೆಚ್ಚು ಹೆಚ್ಚು ಮುದ್ರಿಸುತ್ತಾರೆ, ಪಬ್ಲಿಸಿಟಿ ಮಾಡುತ್ತಾರೆ. ಇದರಿಂದಾಗಿ ಹೊಸಬರ ಅಥವಾ ಗಂಭೀರ ಚಿಂತನೆಯ ಬರಹಗಾರರ ಪುಸ್ತಕಗಳು ಮಾರುಕಟ್ಟೆಯ ರೇಸಿನಿಂದ ಹೊರಗುಳಿಯುತ್ತವೆ.
ನಾವು ಗಮನಿಸಬೇಕಾದ್ದು ಇಷ್ಟೆ: ಒಂದು ಪುಸ್ತಕದ ಸಾವಿರ ಪ್ರತಿಗಳು ಮಾರಾಟವಾದ ತಕ್ಷಣ ಅದು ಶ್ರೇಷ್ಠ ಸಾಹಿತ್ಯವಾಗಿಬಿಡುವುದಿಲ್ಲ. ಹಾಗೆಯೇ ಮಾರಾಟವಾಗದ ಪುಸ್ತಕಗಳು ಕಳಪೆ ಎಂದೂ ಅರ್ಥವಲ್ಲ. ಆದರೆ ಈ ‘ಪಬ್ಲಿಸಿಟಿ ರೀಡಿಂಗ್’ ಎಂಬ ಪಿಡುಗು ಸಾಹಿತ್ಯದ ನಿಜವಾದ ಉದ್ದೇಶವನ್ನೇ ಹಾಳುಗೆಡವುತ್ತಿದೆ. ಪುಸ್ತಕವನ್ನು ಓದುವುದಕ್ಕಿಂತ ಪ್ರದರ್ಶಿಸುವುದೇ ಹೆಚ್ಚಾದಾಗ, ಸಾಹಿತ್ಯದ ಸತ್ವ ಕುಸಿಯುತ್ತಾ ಹೋಗುತ್ತದೆ.
Ravi Belagere ನಕಲಿ ಪುಸ್ತಕಗಳ ಹಾವಳಿ ಹೆಚ್ಚಾಗಿದೆ ಅಂದರೆ ಮಾರುಕಟ್ಟೆಯಲ್ಲಿ ಮನುಷ್ಯನ ದುರಾಸೆ ಕೆಲಸ ಮಾಡುತ್ತಿದೆ ಎಂದರ್ಥ. ಇದು ಅಕ್ಷರ ಲೋಕಕ್ಕೆ ಅಪಾಯಕಾರಿ. ನಮಗೆ ಬೇಕಿರುವುದು ರಂಗುರಂಗಿನ ಕವರ್ ಪೇಜ್‌ಗಳಲ್ಲ, ಅಥವಾ ವೈರಲ್ ಆಗುವ ಡೈಲಾಗ್‌ಗಳಲ್ಲ. ನಮಗೆ ಬೇಕಿರುವುದು ಮನುಷ್ಯನ ಸಂವೇದನೆಯನ್ನು ಬಡಿದೆಬ್ಬಿಸುವ ಗಟ್ಟಿಯಾದ ಸಾಹಿತ್ಯ. ಆ ಸಾಹಿತ್ಯವನ್ನು ನಾವು ಪಬ್ಲಿಸಿಟಿಯ ಹಂಗಿಲ್ಲದೆ ಹುಡುಕಿ ಓದಬೇಕಿದೆ. ಇಲ್ಲದಿದ್ದರೆ, ನಮ್ಮ ಸಾಹಿತ್ಯ ಲೋಕ ಕೇವಲ ಸದ್ದಿನ ಗದ್ದಲವಾಗುತ್ತದೆಯೇ ಹೊರತು, ಅದರಿಂದ ಯಾವುದೇ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.
ಬರಹ -ದೊರೆಸ್ವಾಮಿ ಎಸ್ .ಮಾಧ್ಯಮ ಸಂಶೋಧಕರು
Ravi Belagere Heli Hogu Karana Trend


