ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಹಾಗೂ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಜೆಟ್, ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದ್ದೇನು
ಆರಗ ಜ್ಞಾನೇಂದ್ರ ಆಕ್ರೋಶ
ಸದನದಲ್ಲಿ ಈ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಲೆನಾಡಿನಲ್ಲಿ ಜನರು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಹೊರರಾಜ್ಯದ ಕಳ್ಳರು ಕಾಡಿನ ಮಧ್ಯೆ ಇರುವ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದಾರೆ. ಈ ಹಿಂದೆ ಮಲೆನಾಡಿನ ಕಾಡಿನಲ್ಲಿ ಕಳ್ಳರು ಕದಿಯಲು ಬಂದಾಗ ಅವರಿಗೆ ವಾಪಸ್ಸು ಹೋಗಲು ದಾರಿ ಕಾಣಿಸುತ್ತಿರಲಿಲ್ಲ, ಈಗ ನಾವು ಒತ್ತಡ ಹಾಕಿದಾಗ ಮಾತ್ರ ಪೊಲೀಸರು ಒಂದೆರಡು ಕೇಸ್ ಭೇದಿಸುತ್ತಾರೆ. ಆದರೆ ಸಾಮಾನ್ಯ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ. ಹಾವೇರಿಗೆ ಸಿಎಂ ಬಂದರೂ ತೀರ್ಥಹಳ್ಳಿಯಿಂದಲೇ ಪೊಲೀಸರನ್ನು ಬಂದೋಬಸ್ತ್‌ಗೆ ಕಳುಹಿಸಲಾಗುತ್ತದೆ. ಹೀಗಾದರೆ ಸ್ಥಳೀಯರಿಗೆ ರಕ್ಷಣೆ ನೀಡುವವರು ಯಾರು? ಎಂದು ಪ್ರಶ್ನಿಸಿದರು.
ಚಡ್ಡಿ ಗ್ಯಾಂಗ್ ಹಾವಳಿ
ಈ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರ ಮಾತಿಗೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಧ್ವನಿಗೂಡಿ ಶಿವಮೊಗ್ಗ ನಗರದ ಹೊರವಲಯದ ತುಂಗಾನಗರ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ವಿಪರೀತವಾಗಿದೆ. ಜನರು ರಾತ್ರಿ ನಿದ್ದೆ ಮಾಡಲು ಹೆದರುತ್ತಿದ್ದಾರೆ. ಜಾನುವಾರು ಕಳ್ಳತನವೂ ವ್ಯಾಪಕವಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗುತ್ತಿಲ್ಲ. ಕೂಡಲೇ ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿ ಮತ್ತು ವಾಹನ ಒದಗಿಸಬೇಕು ಎಂದು ಒತ್ತಾಯಿಸಿದರು.

ನಂತರ ಶಾಸಕರ ಆರೋಪಗಳಿಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರಗ ಜ್ಞಾನೇಂದ್ರ ಅವರು ಹೇಳುವಷ್ಟು ಆತಂಕಕಾರಿ ಪರಿಸ್ಥಿತಿ ಜಿಲ್ಲೆಯಲ್ಲಿಲ್ಲ. ತೀರ್ಥಹಳ್ಳಿಯಲ್ಲಿ 2023ರಲ್ಲಿ ದಾಖಲಾದ 12 ಪ್ರಕರಣಗಳಲ್ಲಿ 8 ಪತ್ತೆಯಾಗಿವೆ. 2024ರಲ್ಲಿ 31 ಪ್ರಕರಣಗಳಲ್ಲಿ 10 ಪತ್ತೆಯಾಗಿದ್ದು, ಉಳಿದವು ತನಿಖೆಯ ಹಂತದಲ್ಲಿವೆ. ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸರಿಯಲ್ಲ. ಕಳ್ಳತನ ತಡೆಗೆ ಈಗಾಗಲೇ 20 ಅಂಶಗಳ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ಸಮರ್ಥಿಸಿಕೊಂಡರು.

MLA Araga and Channabasappa expressed concern over theft case ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಗೃಹಸಚಿವರು ಉತ್ತರಿಸಿದರು.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.