ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಹಾಯ್‌ಹೊಳೆ ಸಮೀಪದ ಕಲ್ಲೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬ ಸೇವಾ ಸಮಿತಿಯಿಂದ ಶ್ರೀ ಮಾರಿಕಾಂಬ ಸ್ಥಿರಮೂರ್ತಿ (Marikamba) ಅಷ್ಟಬಂಧ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಸಮಾರಂಭವನ್ನು ಸೆಪ್ಟೆಂಬರ್ 2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಪೂರ್ತಿ ವಿವರ ಕೆಳಗಿದೆ ಓದಿ
ಸೆಪ್ಟೆಂಬರ್ 2ರ ಬುಧವಾರ ಸಂಜೆ 6 ಗಂಟೆಯಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 3ರ ಗುರುವಾರ ಬೆಳಗ್ಗೆ 10.45ಕ್ಕೆ ಶ್ರೀ ಮಾರಿಕಾಂಬ ದೇವಿಯ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಬಳಿಕ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದು, ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಉದ್ಯಮಿ ಸುರೇಶ್ ಕೆ. ಬಾಳೆಗುಂಡಿ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಮಾರಿಕಾಂಬ ಸ್ಥಿರಮೂರ್ತಿ ಅಷ್ಟಬಂಧ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಸಮಾರಂಭದಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಕೋರಿದೆ.
