ಮಲೆನಾಡು ಟುಡೆ ಸುದ್ದಿ / ಮೂಡಿಗೆರೆ / ಮೂಡಿಗೆರೆ (Mudigere) ತಾಲೂಕಿನ ಅಣಜೂರು ಕೆಫೆ ಸಮೀಪ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಶರತ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶರತ್ ತಮ್ಮ ಸ್ನೇಹಿತನ ಬೈಕ್ ಪಡೆದುಕೊಂಡು ಮೂಡಿಗೆರೆ ಭಾಗಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದರು. ಪ್ರವಾಸ ಮುಗಿಸಿಕೊಂಡು ಬೈಕ್‌ನಲ್ಲಿ ಬೆಂಗಳೂರಿನತ್ತ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ವರದಿ ಪ್ರಕಾರ, ಅಣಜೂರು ಕೆಫೆ ಸಮೀಪ ಬರುತ್ತಿದ್ದಾಗ ಶರತ್ ಚಲಾಯಿಸುತ್ತಿದ್ದ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶರತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಗೋಣಿಬೀಡು ಪೊಲೀಸ್ ಠಾಣೆಯ ಎಸ್‌ಐ ಶ್ರೀನಾಥ್ ರೆಡ್ಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
