ಮಲೆನಾಡು ಟುಡೆ ಸುದ್ದಿ / ಮಂಗಳೂರು (Mangaluru)/ ಮೊಬೈಲ್ ಫೋನ್ ವಿಚಾರವಾಗಿ ಸಹೋದರರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದಿದೆ. ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದಡಿ ತಮ್ಮನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಎಂ.ಕೆ. ಹೋಬಳಿಯ ಗದ್ದಿ ಕರಿವಿನಕೊಪ್ಪ ಮೂಲದ, ಮಂಗಳೂರಿನ ಬಿಜೈ ಕಾಪಿಕಾಡ್ ಕೊಟ್ಟಾರ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಡಿವೆಪ್ಪ ಕುಂಬಾರ (41) ಮೃತಪಟ್ಟವರು. ಅವರ ತಮ್ಮ ರಾಜು ಕುಂಬಾರ (36) ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಸಂಜೆ ಕೊಟ್ಟಾರ ಕ್ರಾಸ್ ಬಳಿ ಇವರ ತಾಯಿ ನಡೆಸುತ್ತಿದ್ದ ಗೂಡಂಗಡಿ ಸಮೀಪ ಅಡಿವೆಪ್ಪ ಮತ್ತು ರಾಜು ಬಂದಿದ್ದರು. ಇಬ್ಬರೂ ವಿಪರೀತವಾಗಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ವೇಳೆ ಅಡಿವೆಪ್ಪ ಅವರು ರಾಜುವಿನ ಮೊಬೈಲ್ ಫೋನ್ ತೆಗೆದುಕೊಂಡಿದ್ದು, ಇದರಿಂದ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಅಲ್ಲಿದ್ದ ತಾಯಿ ಇಬ್ಬರಿಗೂ ಬುದ್ಧಿ ಹೇಳಿ, ಅಡಿವೆಪ್ಪ ಅವರ ಬಳಿಯಿದ್ದ ಮೊಬೈಲ್ ಫೋನ್ ಅನ್ನು ರಾಜುವಿಗೆ ಮರಳಿ ಕೊಡಿಸಿದ್ದಾರೆ. ಬಳಿಕ ಸಹೋದರರು ಅಲ್ಲಿಂದ ತಮ್ಮ ಮನೆಗೆ ತೆರಳಿದ್ದರು.
ರಾತ್ರಿ ಸುಮಾರು 10.30ರ ವೇಳೆಗೆ ಮನೆ ಪಕ್ಕದ ನಿವಾಸಿ ಪ್ರೀತಂ ಎಂಬುವವರು ಗೂಡಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಸಂದರ್ಭ ಅಡಿವೆಪ್ಪ ಮತ್ತು ರಾಜು ಹೊಡೆದಾಡಿಕೊಂಡಿದ್ದರು. ಅಲ್ಲದೆ ಈ ವೇಳೆ ಅಡಿವೆಪ್ಪ ಅವರ ಎದೆಗೆ ಚಾಕುವಿನಿಂದ ಇರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ . ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನನ್ನ ಪರೀಕ್ಷಿಸಿದ ವೈದ್ಯಾಧಿಕಾರಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಡಿವೆಪ್ಪ ಮತ್ತು ರಾಜು ತಮ್ಮ ತಾಯಿಯೊಂದಿಗೆ ಮಂಗಳೂರಿನ (Mangaluru) ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ವಾಸವಾಗಿದ್ದರು. ಅವರ ತಂದೆ ಊರಿನಲ್ಲಿದ್ದಾರೆ. ಸಹೋದರರಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದರು ಎಂದು ಮೂಲ ದೂರಿನಲ್ಲಿ ತಿಳಿಸಲಾಗಿದೆ. ಇವರ ತಾಯಿ ಗೂಡಂಗಡಿಯಲ್ಲಿ ದುಡಿದು ಕುಟುಂಬ ನೋಡಿಕೊಳ್ಳುತ್ತಿದ್ದರು. ಇಬ್ಬರ ಮದ್ಯಪಾನದ ಚಟದ ಕಾರಣದಿಂದ ಅವರ ಪತ್ನಿಯರು ಬೇರೆ ಕಡೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.
