ಭದ್ರಾ ನಾಲೆಗಳಿಗೆ ನೀರು ಬಿಡುಗಡೆ: ಸೋಮವಾರ ಅಂತಿಮ ತೀರ್ಮಾನ ; ದಾವಣಗೆರೆ ಬಂದ್‌ ಏಕೆ?

ಹಂಚಿಕೊಳ್ಳಿ
WhatsApp Facebook X Telegram
ಭದ್ರಾ ನಾಲೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಹರಿಹರದಲ್ಲಿ ರೈತರ ಹೆದ್ದಾರಿ ತಡೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ–ದಾವಣಗೆರೆ / ಭದ್ರಾ ನಾಲೆಗಳಿಗೆ ನೀರು ಬಿಡುಗಡೆ (Bhadra Canal Water Release) ಮಾಡುವ ಕುರಿತು ಸೋಮವಾರ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮತ್ತೊಂದೆಡೆ, ಭದ್ರಾ ನಾಲೆಗೆ ತಕ್ಷಣ ನೀರು ಹರಿಸಬೇಕೆಂದು ಆಗ್ರಹಿಸಿ ಆಗಸ್ಟ್ 24ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದ್ದು, ಹರಿಹರದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ರೈತರು, ಜನಪ್ರತಿನಿಧಿಗಳು ಮತ್ತು ವಿವಿಧ ಪ್ರದೇಶಗಳಿಂದ ಮನವಿಗಳು ಬಂದಿವೆ. ಈ ಮನವಿಗಳನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.

2013ರಿಂದ ಈವರೆಗೆ ಭದ್ರಾ ಜಲಾಶಯದಿಂದ ಬಿಡುಗಡೆ ಮಾಡಲಾದ ನೀರಿನ ಪ್ರಮಾಣ, ನೀರಾವರಿ ವ್ಯಾಪ್ತಿಯ ಬೆಳೆ ಪ್ರದೇಶ ಮತ್ತು ಬೆಳೆಯ ಪ್ರಮಾಣ ಸೇರಿದಂತೆ ವಿವಿಧ ಅಂಕಿ–ಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ನೀಡಲಾಗಿದೆ ಅಂತಾ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಎನ್. ಚಲುವರಾಯಸ್ವಾಮಿ ಅವರು ಲಭ್ಯವಿರುವ ಮಾಹಿತಿ ಮತ್ತು ರೈತರ ಮನವಿಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ಬಳಿಕ ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು

ಮಧು ಬಂಗಾರಪ್ಪ , ಸಚಿವರು

ನೀರಿನ ಸಮಸ್ಯೆ ವಿವಿಧೆಡೆ ಉಂಟಾಗುವ ಸಾಧ್ಯತೆ ಕುರಿತು ಮುಖ್ಯಮಂತ್ರಿ ಈಗಾಗಲೇ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಹೀಗಾಗಿ ಭದ್ರಾ ಜಲಾಶಯದ ನೀರಿನ ಲಭ್ಯತೆ ಮತ್ತು ಬೆಳೆ ಪ್ರದೇಶಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸೋಮವಾರ ಕೈಗೊಳ್ಳುವ ನಿರ್ಧಾರದ ಬಳಿಕ ಹೆಚ್ಚಿನ ವಿವರ ತಿಳಿಯಲಿವೆ ಅಂತಾ ಸಚಿವರು ಸ್ಪಷ್ಟ ಪಡಿಸಿದ್ದಾರೆ.

ಆಗಸ್ಟ್ 24ರಂದು ದಾವಣಗೆರೆ ಬಂದ್

ಭದ್ರಾ ನಾಲೆಗೆ ತಕ್ಷಣ ನೀರು ಬಿಡುಗಡೆ ಮಾಡಬೇಕು ಹಾಗೂ ರೈತರ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಆಗಸ್ಟ್ 24ರಂದು ಬೆಳಗ್ಗೆ 8 ಗಂಟೆಯಿಂದ ಸಂಪೂರ್ಣ ದಾವಣಗೆರೆ ಬಂದ್ ನಡೆಸಲು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಘಟಕ ಕರೆ ನೀಡಿದೆ.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮತ್ತು ಬಂದ್ ಆಯೋಜಿಸಲಾಗಿದೆ. ಬಂದ್‌ಗೆ ಸಾರ್ವಜನಿಕರು ಮತ್ತು ವಿವಿಧ ವ್ಯಾಪಾರ ಹಾಗೂ ಸೇವಾ ವಲಯದವರು ಬೆಂಬಲ ನೀಡುವಂತೆ ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ ವರ್ತಕರು, ಬಟ್ಟೆ ಅಂಗಡಿ ಮತ್ತು ಬೆಳ್ಳಿ–ಬಂಗಾರದ ಅಂಗಡಿಗಳ ಮಾಲೀಕರು, ಹೋಟೆಲ್ ಹಾಗೂ ಮಿಲ್ ಮಾಲೀಕರು, ಕೂಲಿ ಕಾರ್ಮಿಕರು, ದಿನಸಿ ವ್ಯಾಪಾರಿಗಳು, ಆಟೊ ಚಾಲಕರು ಮತ್ತು ಮಾಲೀಕರು, ತರಕಾರಿ ಹಾಗೂ ಈರುಳ್ಳಿ ವರ್ತಕರು ಸೇರಿದಂತೆ ಎಲ್ಲ ವರ್ಗದ ಜನರು ಬಂದ್‌ಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ. ರೈತರ ಬದುಕು ಮತ್ತು ದಾವಣಗೆರೆ ಜಿಲ್ಲೆಯ ನೀರಿನ ಸಮಸ್ಯೆಗೆ ಸಂಬಂಧಿಸಿದ ಹೋರಾಟ ಇದಾಗಿದೆ. ಸಾರ್ವಜನಿಕರು ಸಹಕರಿಸಿ ಬಂದ್ ಯಶಸ್ವಿಗೊಳಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಹರಿಹರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ

ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಭದ್ರಾ ಜಲಾಶಯದಿಂದ ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಹರಿಹರ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ತಮ್ಮ ಪಾಲಿನ ನೀರನ್ನು ಕೃಷಿ ಭೂಮಿಗೆ ಹರಿಸಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಹಲವು ಗ್ರಾಮಗಳಿಂದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಈ ಹಿಂದೆ ಜಲಾಶಯದಲ್ಲಿ ನೀರಿನ ಮಟ್ಟ 160 ಅಡಿ ಇದ್ದ ಸಂದರ್ಭದಲ್ಲಿಯೂ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಬೆಂಗಳೂರಿನಲ್ಲಿ ಸಭೆ ನಡೆಸಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಭದ್ರಾ ಕಾಡಾ ಸಭೆಯ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor