ಪೌತಿ ಖಾತೆ ಪ್ರಕ್ರಿಯೆ ಸರಳಗೊಳಿಸಿದ ಸರ್ಕಾರ, ಹೊರರಾಜ್ಯ-ವಿದೇಶದಲ್ಲಿರುವ ವಾರಸುದಾರರಿಗೂ ಹೊಸ ಮಾರ್ಗಸೂಚಿ

ಹಂಚಿಕೊಳ್ಳಿ
WhatsApp Facebook X Telegram
Elephant Mahout Recruitment 2026

Revises Pauti Khata Rules / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯದಲ್ಲಿ ಕೃಷಿ ಜಮೀನು ಹೊಂದಿರುವ ಖಾತೆದಾರರು ಮೃತಪಟ್ಟ ನಂತರ ಅವರ ಕಾನೂನುಬದ್ಧ ವಾರಸುದಾರರು ಹೊರರಾಜ್ಯ ಅಥವಾ ವಿದೇಶದಲ್ಲಿ ವಾಸಿಸುತ್ತಿದ್ದರೆ ಪೌತಿ ಖಾತೆ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಿ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಈ ಹಿಂದೆ 07-03-2026ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಿ ಕಂದಾಯ ಇಲಾಖೆ 12-08-2026ರಂದು ಹೊಸ ಸೂಚನೆಗಳನ್ನು ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ

ಕೃಷಿ ಜಮೀನಿನ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಸುದಾರರು ಹೊರರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ನೆಲೆಸಿರುವುದರಿಂದ ಪೌತಿ ಖಾತೆ ಮಾಡಿಸುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಪ್ರಾಯೋಗಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಹೊರರಾಜ್ಯದಲ್ಲಿ ಶಾಶ್ವತವಾಗಿ ವಾಸಿಸುತ್ತಿರುವವರು ಮತ್ತು ಆಧಾರ್ ದಾಖಲೆಯಲ್ಲಿಯೂ ಹೊರರಾಜ್ಯದ ವಿಳಾಸ ಹೊಂದಿರುವ ವಾರಸುದಾರರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ ಅನುಸರಿಸಬೇಕಾದ ಪ್ರತ್ಯೇಕ ವಿಧಾನವನ್ನು ಸರ್ಕಾರ ನಿಗದಿಪಡಿಸಿದೆ.

ಅಂತಹ ವಾರಸುದಾರರು ತಾವು ವಾಸಿಸುತ್ತಿರುವ ರಾಜ್ಯದ ಸಕ್ಷಮ ಪ್ರಾಧಿಕಾರದಿಂದ ಡಿಜಿಟಲ್ ರೂಪದಲ್ಲಿ ಪಡೆದಿರುವ ವಂಶವೃಕ್ಷ ಪ್ರಮಾಣಪತ್ರ ಅಥವಾ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಅಥವಾ ಸಿವಿಲ್ ನ್ಯಾಯಾಲಯ ನೀಡಿರುವ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ. ಸಿವಿಲ್ ನ್ಯಾಯಾಲಯದಿಂದ ಪಡೆದಿರುವ Succession Certificate ಕೂಡ ಈ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಹೊರರಾಜ್ಯದಲ್ಲಿ ನೀಡಲಾದ ಈ ದಾಖಲೆ, ಇಂಗ್ಲಿಷ್ ಹೊರತಾದ ಭಾಷೆಯಲ್ಲಿದ್ದಲ್ಲಿ ಅವುಗಳ ಇಂಗ್ಲಿಷ್ ಭಾಷಾಂತರಿತ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಸಲ್ಲಿಸಲಾಗುವ ದಾಖಲೆಗಳನ್ನು ತಾವು ವಾಸಿಸುವ ರಾಜ್ಯದಲ್ಲಿನ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದಾಗಿ ದೃಢಪಡಿಸುವ ನೋಟರಿಯಿಂದ ಪ್ರಮಾಣೀಕರಿಸಿದ ಅಫಿಡವಿಟ್ ಅನ್ನು ₹100 ಮೌಲ್ಯದ ಛಾಪಾ ಕಾಗದದಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.

  1. ವಂಶವೃಕ್ಷದಲ್ಲಿ ನಮೂದಾಗಿರುವ ಕುಟುಂಬದ ಎಲ್ಲ ವಾರಸುದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ದಾಖಲೆ ಸಲ್ಲಿಸಬೇಕು.
  2. ಆದರೆ ಕುಟುಂಬದ ವಾರಸುದಾರರಲ್ಲಿ ಯಾರಾದರೂ ವಿದೇಶದಲ್ಲಿ ವಾಸಿಸುತ್ತಿದ್ದು, ಅವರಿಗೆ ಅನ್ವಯಿಸುವ ಪರಿಸ್ಥಿತಿಯಲ್ಲಿ ಆಧಾರ್ ಬದಲಿಗೆ ಪಾಸ್‌ಪೋರ್ಟ್ ದಾಖಲೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  3. ಈ ರೀತಿ ಹೊರರಾಜ್ಯದಿಂದ ಸಲ್ಲಿಸಲಾಗುವ ವಂಶವೃಕ್ಷ, ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ, ಭಾಷಾಂತರಿತ ದಾಖಲೆ, ಪ್ರಮಾಣೀಕೃತ ಅಫಿಡವಿಟ್ ಸೇರಿದಂತೆ ನಿಗದಿಪಡಿಸಿರುವ ದಾಖಲೆಗಳನ್ನು ಕರ್ನಾಟಕದಲ್ಲಿರುವ ಕಂದಾಯ ಜಮೀನಿಗೆ ಸಂಬಂಧಿಸಿದ ಪೌತಿ ಖಾತೆ ಬದಲಾವಣೆಯ ಉದ್ದೇಶಕ್ಕೆ ಬಳಸಬಹುದಾಗಿದೆ.
  4. ಇದಕ್ಕಾಗಿ ಪ್ರತ್ಯೇಕವಾಗಿ ಕರ್ನಾಟಕ ಸರ್ಕಾರದಿಂದ ಮತ್ತೊಂದು ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ತಿದ್ದುಪಡಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
  5. ಕುಟುಂಬದ ಎಲ್ಲ ವಾರಸುದಾರರ ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಆಧಾರ್ ಸಂಖ್ಯೆಯ ಮೂಲಕ OTP ಅಥವಾ ಬಯೋಮೆಟ್ರಿಕ್ ವಿಧಾನದಲ್ಲಿ ಇ-ಕೆವೈಸಿ ಮಾಡಿಸಬೇಕಾಗುತ್ತದೆ. ಆದರೆ ವಿದೇಶಿ ಪೌರತ್ವ ಹೊಂದಿರುವ ವಾರಸುದಾರರಿಗೆ ಈ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ.

ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿರುವ ಮೃತ ಖಾತೆದಾರರ ಎಲ್ಲಾ ಕಾನೂನುಬದ್ಧ ವಾರಸುದಾರರೂ ವಿದೇಶದ ಪೌರತ್ವ ಪಡೆದಿದ್ದರೆ ಅವರಿಗೂ ಪ್ರತ್ಯೇಕ ವಿಧಾನ ನಿಗದಿಪಡಿಸಲಾಗಿದೆ. ಮೂಲತಃ ಭಾರತೀಯ ಕುಟುಂಬಕ್ಕೆ ಸೇರಿದವರಾಗಿದ್ದು, ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿರುವ ಕುಟುಂಬದ ಎಲ್ಲಾ ವಾರಸುದಾರರು ವಿದೇಶಿ ಪೌರತ್ವ ಪಡೆದಿರುವ ಸಂದರ್ಭದಲ್ಲಿ, ಅವರು ಸಿವಿಲ್ ನ್ಯಾಯಾಲಯದಿಂದ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಅಂದರೆ Succession Certificate ಪಡೆದು ಸಂಬಂಧಿಸಿದ ನಾಡಕಚೇರಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು.

ಇಂತಹ ಅರ್ಜಿಯೊಂದಿಗೆ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಹಾಗೂ ಮೃತ ಖಾತೆದಾರರ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದಾಗಿ ನೋಟರಿಯಿಂದ ಪ್ರಮಾಣೀಕರಿಸಲಾದ ₹100 ಮೌಲ್ಯದ ಛಾಪಾ ಕಾಗದದ ಅಫಿಡವಿಟ್ ಕೂಡ ನೀಡಬೇಕು. ಇದರೊಂದಿಗೆ ಪಾಸ್‌ಪೋರ್ಟ್ ಪ್ರತಿ ಸಲ್ಲಿಸುವುದು ಕಡ್ಡಾಯವಾಗಿದೆ. ಅಲ್ಲದೆ, ತಮ್ಮ ಕುಟುಂಬದ ವಂಶವೃಕ್ಷದ ಕುರಿತು ನೋಟರಿಯಿಂದ ಪ್ರಮಾಣೀಕರಿಸಿದ ಮತ್ತೊಂದು ಅಫಿಡವಿಟ್ ಅನ್ನು ₹100 ಮೌಲ್ಯದ ಛಾಪಾ ಕಾಗದದಲ್ಲಿ ಸಲ್ಲಿಸಬೇಕೆಂದು ಸರ್ಕಾರ ಸೂಚಿಸಿದೆ. ಈ ದಾಖಲೆಗಳ ಆಧಾರದಲ್ಲಿ ವಿದೇಶಿ ಪೌರತ್ವ ಪಡೆದಿರುವ ವಾರಸುದಾರರ ಪೌತಿ ಖಾತೆ ಅರ್ಜಿಯನ್ನು ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಆದರೆ ಒಂದು ಕುಟುಂಬದ ಎಲ್ಲ ವಾರಸುದಾರರೂ ವಿದೇಶಿ ಪೌರತ್ವ ಪಡೆದಿಲ್ಲದೆ, ಕೆಲವರು ಮಾತ್ರ ವಿದೇಶದ ಪೌರತ್ವ ಪಡೆದಿದ್ದರೆ ಪ್ರಕ್ರಿಯೆಯಲ್ಲಿ ಮತ್ತೊಂದು ವಿನಾಯಿತಿ ನೀಡಲಾಗಿದೆ. ಮೂಲತಃ ಭಾರತೀಯ ಕುಟುಂಬವಾಗಿದ್ದು ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿರುವ ಸಂದರ್ಭದಲ್ಲಿ, ಪೌತಿ ಖಾತೆ ಕೋರುವ ವಾರಸುದಾರರಲ್ಲಿ ಕೆಲವರು ಮಾತ್ರ ವಿದೇಶಿ ಪೌರತ್ವ ಪಡೆದಿದ್ದರೆ, ಭಾರತದಲ್ಲಿರುವ ಹಾಗೂ ಭಾರತೀಯ ಪೌರತ್ವ ಹೊಂದಿರುವ ವಾರಸುದಾರರು ಸಕ್ಷಮ ಪ್ರಾಧಿಕಾರದಿಂದ ವಂಶವೃಕ್ಷ ಪಡೆದು ಅಗತ್ಯ ದಾಖಲೆಗಳೊಂದಿಗೆ ಪೌತಿ ಖಾತೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೌತಿ ಖಾತೆ ಕೋರುವ ವಾರಸುದಾರರು ಹೊರರಾಜ್ಯ ಅಥವಾ ವಿದೇಶದಲ್ಲಿ ಇದ್ದರೂ ಆಧಾರ್ ಇ-ಕೆವೈಸಿಗೆ ಸಂಬಂಧಿಸಿದ ನಿಯಮಗಳನ್ನು ಅವರ ಪೌರತ್ವ ಮತ್ತು ದಾಖಲೆಗಳ ಸ್ಥಿತಿಗೆ ಅನುಗುಣವಾಗಿ ಅನ್ವಯಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ವಿದೇಶಿ ಪೌರತ್ವ ಹೊಂದಿರುವವರಿಗೆ ಆಧಾರ್ ಇ-ಕೆವೈಸಿ ಅನ್ವಯಿಸುವುದಿಲ್ಲ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿದೆ.

ಪರಿಷ್ಕೃತ ಮಾರ್ಗಸೂಚಿಯಂತೆ ಪೌತಿ ಖಾತೆ ಕೋರುವ ವಾರಸುದಾರರು ಅಗತ್ಯ ದಾಖಲೆಗಳೊಂದಿಗೆ ಜಮೀನಿಗೆ ಸಂಬಂಧಿಸಿದ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿ ಅಥವಾ ರಾಜಸ್ವ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಹೊರರಾಜ್ಯ ಮತ್ತು ವಿದೇಶದಲ್ಲಿ ವಾಸಿಸುತ್ತಿರುವ ವಾರಸುದಾರರು ಸಲ್ಲಿಸುವ ಪೌತಿ ಖಾತೆ ಅರ್ಜಿಗಳನ್ನು ನಾಡಕಚೇರಿ ಮಟ್ಟದಲ್ಲಿ ಭೂಮಿ ಅರ್ಜಿ ಸ್ವೀಕೃತಿ ತಂತ್ರಾಂಶದ ಮೂಲಕ ದಾಖಲಿಸಿ, ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಇ-ಪೌತಿ ತಂತ್ರಾಂಶದ ಲಾಗಿನ್ ಮೂಲಕ ಅರ್ಜಿಯನ್ನು ನಮೂದಿಸುವಂತೆ ಸೂಚಿಸಲಾಗಿದೆ. ನಂತರ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಇ-ಪೌತಿ ತಂತ್ರಾಂಶದಲ್ಲಿ ಪೌತಿ ಖಾತೆ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗಿದೆ.

ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿರುವ ಖಾತೆದಾರರು ಮೃತಪಟ್ಟಿದ್ದು, ಅವರ ಕಾನೂನುಬದ್ಧ ವಾರಸುದಾರರು ಹೊರರಾಜ್ಯ ಅಥವಾ ವಿದೇಶದಲ್ಲಿ ಶಾಶ್ವತವಾಗಿ ವಾಸಿಸುತ್ತಿರುವ ಪ್ರಕರಣಗಳಲ್ಲಿ ಪೌತಿ ಖಾತೆ ಮಾಡಲು ಅವಕಾಶವಾಗುವಂತೆ ಇ-ಪೌತಿ ತಂತ್ರಾಂಶದಲ್ಲಿಯೂ ಅಗತ್ಯ ಮಾರ್ಪಾಡು ಮಾಡಲು ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶಕ್ಕೆ ಸೂಚಿಸಲಾಗಿದೆ. ಹೊರರಾಜ್ಯ ಮತ್ತು ವಿದೇಶದಲ್ಲಿರುವ ವಾರಸುದಾರರ ಕಾರಣದಿಂದ ಪೌತಿ ಖಾತೆ ಪ್ರಕ್ರಿಯೆ ಮುಂದುವರಿಸಲು ಉಂಟಾಗುತ್ತಿದ್ದ ದಾಖಲೆ ಹಾಗೂ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳಿಗೆ ನಿರ್ದಿಷ್ಟ ವಿಧಾನ ರೂಪಿಸುವುದು ಈ ತಿದ್ದುಪಡಿಯ ಪ್ರಮುಖ ಅಂಶವಾಗಿದೆ. ಹೊರರಾಜ್ಯದಲ್ಲಿರುವವರಿಗೆ ಅಲ್ಲಿನ ಸಕ್ಷಮ ಪ್ರಾಧಿಕಾರದ ದಾಖಲೆಗಳಿಗೆ ಮಾನ್ಯತೆ, ವಿದೇಶಿ ಪೌರತ್ವ ಪಡೆದವರಿಗೆ ಪಾಸ್‌ಪೋರ್ಟ್ ಮತ್ತು Succession Certificate ಆಧಾರಿತ ಪ್ರಕ್ರಿಯೆ ಹಾಗೂ ಕೆಲವರು ಮಾತ್ರ ವಿದೇಶಿ ಪೌರತ್ವ ಪಡೆದಿರುವ ಕುಟುಂಬಗಳಿಗೆ ಪ್ರತ್ಯೇಕ ವಿಧಾನವನ್ನು ಸರ್ಕಾರ ನಿಗದಿಪಡಿಸಿದೆ.

ಈ ಪರಿಷ್ಕೃತ ಮಾರ್ಗಸೂಚಿಗೆ ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಸಹಿ ಮಾಡಿದ್ದು, ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಭೂಮಿ ಮತ್ತು ಇ-ಪೌತಿ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸೂಚನೆ ನೀಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor