KPID Act / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮಗೆ KPID ಅಂದರೆ ಗೊತ್ತಾ? ಹೀಗೊಂದು ಆಕ್ಟ್ ಇದೆ ಅಂತಾ ಗೊತ್ತಿದ್ಯಾ? ಗೊತ್ತಿದ್ರರೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ! ಗೊತ್ತಿಲ್ಲದಿದ್ದರೇ ಈ ಆಕ್ಟ್ ಎಷ್ಟು ಉಪಯೋಗ ಅನ್ನೋದನ್ನು ಸಹ ಓದಿಕೊಳ್ಳಿ. ಕೆಪಿಐಡಿ Karnataka Protection of Interest Act, 2004 ಆಕ್ಟ್ ಅಂದರ ಏನು ಎಂಬುದರ ಮಾಹಿಯುಕ್ತ ವರದಿ ಇಲ್ಲಿದೆ.
ಜನರಿಂದ ದುಡ್ಡು ತೆಗೆದುಕೊಂಡು ವಂಚಿಸುವ ಹಣಕಾಸು ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ಬಳಕೆಯಾಗುವ ಕಾಯಿದೆಯೇ Karnataka Protection of Interest Act, 2004. ಸಾರ್ವಜನಿಕರಿಗೆ ಬಡ್ಡಿಯ ಆಮಿಷವೊಡ್ಡಿ ಹಣ ಸಂಗ್ರಹಿಸಿ, ಕಾಲಮಿತಿಯೊಳಗೆ ಅಸಲು ಮತ್ತು ಬಡ್ಡಿ ಮರುಪಾವತಿಸದೆ ವಂಚಿಸುವ ಹಣಕಾಸು ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಠೇವಣಿದಾರರ ಹಿತರಕ್ಷಣಾ ಕಾಯ್ದೆ 2004(KPID Act 2004) ಪ್ರಬಲ ಅಸ್ತ್ರ ಅಂದರೆ ತಪ್ಪಾಗಲ್ಲ. ಯಾವುದೇ ವ್ಯಕ್ತಿ, ಪ್ರಮೋಟರ್ ಅಥವಾ ಹಣಕಾಸು ಸಂಸ್ಥೆಗಳ, ಯಾವುದೇ ರೂಪದಲ್ಲಿ ಠೇವಣಿ ಪಡೆದು ಭರವಸೆ ನೀಡಿದಂತೆ ನಡೆದುಕೊಳ್ಳದಿದ್ದರೆ ಈ ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದಾಗಿದೆ.
ಠೇವಣಿದಾರರ ಹಿತರಕ್ಷಣಾ ಕಾಯ್ದೆ 2004(KPID Act) ಪ್ರಮುಖ ಉದ್ದೇಶ
- ಈ ಕಾಯ್ದೆಯ ಪ್ರಮುಖ ಉದ್ದೇಶ ಠೇವಣಿದಾರರನ್ನು ವಂಚನೆಯಿಂದ ರಕ್ಷಿಸುವುದು.
- ಮೋಸದ ಮೂಲಕ ಹಣ ಸಂಗ್ರಹಿಸಿದ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದು
- ವಂಚಕ ಸಂಸ್ಥೆ ಹಾಗೂ ಅದರ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು
- ಅಲ್ಲದೆ, ವಶಪಡಿಸಿಕೊಂಡ ಆಸ್ತಿಯನ್ನು ವಿಲೇವಾರಿ ಮಾಡುವ ಮೂಲಕ ನೊಂದ ಠೇವಣಿದಾರರಿಗೆ ಅವರ ಹಣವನ್ನು ಮರುಪಾವತಿಸಲು ಅಗತ್ಯವಾದ ಎಲ್ಲಾ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಪಿಐಡಿ ಕಾಯ್ದೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಕಾಯ್ದೆಯ ಅನ್ವಯ ಪ್ರಕರಣ ದಾಖಲಾದ ಕೂಡಲೇ ಸರ್ಕಾರವು ಸಕ್ಷಮ ಪ್ರಾಧಿಕಾರವನ್ನು ನೇಮಕ ಮಾಡುತ್ತದೆ. ಈ ಪ್ರಾಧಿಕಾರವು ವಂಚಕ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ಇಂತಹ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಆರೋಪ ಸಾಬೀತಾದರೆ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಮೋಟರ್‌ಗಳಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ಪ್ರಮಾಣದ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.
ಹೀಗಿದ್ದೂ ಸಹ ಯಾವುದಾದರೂ ಸಂಸ್ಥೆ ಅಥವಾ ಪ್ರಮೋಟರ್ಗಳಲ್ಲಿ ಇನ್ವೆಸ್ಟ್ ಮಾಡುವುದಕ್ಕೂ ಮೊದಲು ಸಾರ್ವಜನಿಕರು ಅದು ಸರ್ಕಾರದಿಂದ ಮಾನ್ಯತೆ ಪಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು! ಏಕೆಂದರೆ ಕಾಯಿಲೆ ವಾಸಿ ಮಾಡುವುದಕ್ಕಿಂತ! ಕಾಯಿಲೆ ಬರದಂತೆ ಆರೈಕೆ ಮಾಡಿಕೊಳ್ಳುವುದೇ ಉತ್ತಮ,.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
