Polymer Banknotes /ಮಲೆನಾಡು ಟುಡೆ ಸುದ್ದಿ / ನವದೆಹಲಿ / ದೊಡ್ಡ ನೋಟುಗಳಿಗಿಂತಲೂ, 10 ಮತ್ತು 20 ರೂಪಾಯಿ ನೋಟುಗಳೊಂದಿಗೆ ಮಕ್ಕಳಿಂದ ಹಿರಿಯವರೆಗೂ ಸಾವಿರ ಲಕ್ಷ ಭಾವನೆಗಳಿಗೆ ಎಂಬುದರಲ್ಲಿ ಡೌಟಿಲ್ಲ..
ಲಾಗಾಯ್ತಿನಿಂದಲೂ ಮುಸುಕಾದ, ಬೆವರ ವಾಸನೆಯೊಂದಿಗೆ ಬೆರತೆ ಕಮಟು ಪರಿಮಳ ಹತ್ತಿಪ್ಪತ್ತರ ನೋಟಿಗೆ ಅದರ ಅಸಲಿ ಮೌಲ್ಯಕ್ಕಿಂತಲೂ ಬಹಳಷ್ಟು ಜಾಸ್ತಿ ವ್ಯಾಲ್ಯು ಇತ್ತು. ಮೊಮ್ಮನಿಗೆ ಅಜ್ಜಿ ಕೊಟ್ಟ 20 ರೂಪಾಯಿ ಪರ್ಸಿನಲ್ಲಿ ಹಾಗೆ ಇರುತ್ತಿತ್ತು. ಅಜ್ಜನಿಗೆ ಮೊಮ್ಮಗ ನೀಡಿದ 10 ರೂಪಾಯಿ, ತಾಯಿಯ ಸಾಸಿವೆ ಡಬ್ಬದಲ್ಲಿ ಕದಿಯಲು ಸಿಕ್ಕ 20 ರೂಪಾಯಿ, ಅಪ್ಪನ ಚಡ್ಡಿ ಚೇಬಿನೊಳಗೆ ಸಿಕ್ಕ ಬಿಡಿಗಾಸಿನ ನೋಟುಗಳು. ಹೀಗೆ ಸಾಗುತ್ತವೆ. 10 ಮತ್ತು20 ರ ನೋಟಿ ಪ್ರವರ..
ಅಂದಹಾಗೆ ವಿಷಯ ಏನೆಂದರೆ ಈ ನೋಟುಗಳು ಇದೀಗ ಮತ್ತೆ ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ದೊಡ್ಡ ನೋಟಿನ ಸೈಜಿನಿಂದ ಹಿಡಿದು ಸಣ್ಣದಾಗುತ್ತಲೇ ಬಂದಿರುವ ನಾಗರಿಕತೆಯ ಇತಿಹಾಸ ಹೊಂದಿರುವ ನೋಟುಗಳು, ಇದೀಗ ಕಾಗದದ ಬದಲಾಗಿ ಪ್ಲಾಸ್ಟಿಕ್ ನೋಟುಗಳಾಗಿ ಬದಲಾಗುತ್ತಿವೆ. ಹೌದು, ಈ ಬಗ್ಗೆ ಪ್ರಕ್ರಿಯೆಗಳು ಸಹ ಆರಂಭವಾಗಿದೆ.
10 ಮತ್ತು 20 ರೂಪಾಯಿ ಮುಖಬೆಲೆಯ ಪಾಲಿಮರ್ ಬ್ಯಾಂಕ್‌ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಹಾಗಂತ ಈ ನೋಟುಗಳನ್ನ ಹಾಲಿ ನೋಟುಗಳ ಜೊತೆಗೆ ಎಕ್ಸ್ಚೇಂಜ್ ಮಾಡುತ್ತಿಲ್ಲ ಬದಲಾಗಿ, ಹತ್ತಿ-ಕಾಗದದ ಬದಲಿಗೆ ತೆಳುವಾದ, ಹೊಂದಿಕೊಳ್ಳುವ ಪ್ಲಾಸ್ಟಿಕ್ ಫಿಲ್ಮ್‌ನಿಂದ ಮಾಡಿದ ಪಾಲಿಮರ್ ಬ್ಯಾಂಕ್‌ನೋಟು ಹೊಸದಾಗಿ ರಿಲೀಸ್ ಮಾಡಲಾಗುತ್ತಿದೆಯಂತೆ.
ಇತ್ತೀಚಿನ ಹಣಕಾಸು ನೀತಿ ಸಮಿತಿ ಸಭೆಯ ನಂತರ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಈ ನೋಟುಗಳ ಬಿಡುಗಡೆಯು ಹಂತಹಂತವಾಗಿ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ಬ್ಯಾಂಕ್‌ನೋಟುಗಳನ್ನು ಮುದ್ರಿಸುವ ಪಾಲಿಮರ್ ಪ್ಲೇಟ್ಗಾಗಿ ಪ್ರಸ್ತುತ ಟೆಂಡರ್ ಕರೆಯಲಾಗಿದೆ ಮತ್ತು ಇದು ಬಂದ ನಂತರ ಪರೀಕ್ಷೆಗಳು, ಭದ್ರತಾ ಅನುಮತಿ ಹಾಗೂ ಇತರ ಪ್ರಕ್ರಿಯೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಪಾಲಿಮರ್ ಬ್ಯಾಂಕ್‌ನೋಟುಗಳನ್ನು ದ್ವಿಮುಖವಾಗಿ ಆಧಾರಿತ ಪಾಲಿಪ್ರೊಪಿಲೀನ್ (ಬಿಒಪಿಪಿ) ನಿಂದ ಮಾಡಲಾಗಿದ್ದು, ಇದು ಸವೆಯಲ್ಲ, ಹರಿಯಲ್ಲ ಮುರಿಯಲ್ಲ ಅಂತಾ ಹೇಳಲಾಗುತ್ತಿದೆ. ಹಾಗಾಗಿ ಹೆಚ್ಚು ಬಾಳಿಕೆ ಬರುತ್ತೆ ಎಂದು ನಂಬಲಾಗಿದೆ. ಅಲ್ಲದೆ ನೆನೆಯಲ್ಲ, ಕೊಳೆಯಾಗಲ್ಲ, ಮಬ್ಬಾಗಲ್ಲ ಎಂದು ನಂಬಲಾಗುತ್ತಿದೆ. ಕಾಗದದ ನೋಟಿಗಿಂತಹ 2.5 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಆಸ್ಟ್ರೇಲಿಯಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ದೇಶಗಳು ಈಗಾಗಲೇ ಪಾಲಿಮರ್ ಕರೆನ್ಸಿಯನ್ನು ಬಳಸುತ್ತಿವೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, 10 ಮತ್ತು 20 ರೂಪಾಯಿ ಮುಖಬೆಲೆಯ ತಲಾ 1 ಬಿಲಿಯನ್ ಪಾಲಿಮರ್ ಬ್ಯಾಂಕ್‌ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲು ಆರ್‌ಬಿಐನ ಕೇಂದ್ರೀಯ ಮಂಡಳಿ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.
1934 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 25 ರ ಪ್ರಕಾರ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು ಮತ್ತು ಕ್ಷೇತ್ರ ಪ್ರಯೋಗಗಳ ಯಶಸ್ವಿ ಪೂರ್ಣಗೊಂಡ ನಂತರ ನಿಯಮಿತ ವಿತರಣೆಗಾಗಿ ಸರ್ಕಾರ ಇದನ್ನು ಅನುಮೋದಿಸಿದೆ. ಪಾಲಿಮರ್ ಬ್ಯಾಂಕ್‌ನೋಟುಗಳನ್ನು ವಿತರಿಸಲು ಉದ್ದೇಶಿಸಲಾಗಿದ್ದು, ಕಾಗದದ ಕರೆನ್ಸಿಯನ್ನು ಬದಲಾಯಿಸುವ ಪ್ರಸ್ತಾಪವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದ ನಂತರ ಪಾಲಿಮರ್ ನೋಟುಗಳು ಸಾಂಪ್ರದಾಯಿಕ ಕಾಗದದ ನೋಟುಗಳ ಜೊತೆಯಲ್ಲೇ ಚಲಾವಣೆಯಲ್ಲಿರಲಿವೆ. ದೀರ್ಘಕಾಲ ಬಾಳಿಕೆ ಬರುವ ಈ ನೋಟುಗಳು ಕಾಲಕ್ರಮೇಣ ಬದಲಿ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಸುಧಾರಿತ ಭದ್ರತಾ ವೈಶಿಷ್ಟ್ಯಗಳ ಮೂಲಕ ನಕಲಿ ಮಾಡುವುದನ್ನು ಕಷ್ಟಕರವಾಗಿಸುತ್ತದೆ.
