Shimoga to Jog Falls ಶಿವಮೊಗ್ಗ: ಪ್ರಸ್ತುತ ಮಳೆಗಾಲದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಜೋಗ್‌ಫಾಲ್ಸ್ ವೀಕ್ಷಿಸಲು ಬಯಸುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಶಿವಮೊಗ್ಗ ವಿಭಾಗವು ವಿಶೇಷ ಪ್ರವಾಸಿ ಪ್ಯಾಕೇಜ್ ಬಸ್ ಸೇವೆಯನ್ನು ಪರಿಚಯಿಸಿದೆ. ಸಾರ್ವಜನಿಕರು ಹಾಗೂ ಸುಂದರ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಈ ವಿಶೇಷ ಸಾರಿಗೆ ಕಾರ್ಯಾಚರಣೆ ನಡೆಸಲಿದೆ.
ಶಿವಮೊಗ್ಗ : ತುಂಗಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಇವತ್ತು ?
ಈ ವಿಶೇಷ ಪ್ರವಾಸಿ ಬಸ್ಸು ಶಿವಮೊಗ್ಗದ ಮುಖ್ಯ ಬಸ್ ನಿಲ್ದಾಣದಿಂದ ಹೊರಟು, ಪ್ರಸಿದ್ಧ ಧಾರ್ಮಿಕ ತಾಣ ಸಿಗಂದೂರು, ನದಿ ಮೂಲವಾದ ವರದಾಮೂಲ ಹಾಗೂ ಐತಿಹಾಸಿಕ ಪ್ರಸಿದ್ಧ ಇಕ್ಕೇರಿ ಮತ್ತು ಕೆಳದಿ ಮಾರ್ಗವಾಗಿ ಜೋಗ್‌ಫಾಲ್ಸ್ ತಲುಪಲಿದೆ.
ಸಮಯದ ವೇಳಾಪಟ್ಟಿಯಂತೆ, ಬಸ್ಸು ಶಿವಮೊಗ್ಗದಿಂದ ಬೆಳಿಗ್ಗೆ 8:00 ಗಂಟೆಗೆ ಹೊರಟು ಮಧ್ಯಾಹ್ನ 2:00 ಗಂಟೆಗೆ ಜೋಗ್‌ಫಾಲ್ಸ್ ತಲುಪಲಿದೆ. ಜೋಗ್‌ಫಾಲ್ಸ್‌ನಿಂದ ಸಂಜೆ 5:00 ಗಂಟೆಗೆ ಹಿಂತಿರುಗಿ, ರಾತ್ರಿ 7:30 ಕ್ಕೆ ಶಿವಮೊಗ್ಗ ನಗರಕ್ಕೆ ವಾಪಸ್ ಆಗಲಿದೆ. ಈ ಪ್ಯಾಕೇಜ್‌ಗೆ ದರಗಳನ್ನು ನಿಗದಿಪಡಿಸಲಾಗಿದ್ದು, ವಯಸ್ಕರಿಗೆ ರೂ. 450 ಹಾಗೂ ಮಕ್ಕಳಿಗೆ ರೂ. 250 ಟಿಕೆಟ್ ದರ ಇರಲಿದೆ.
ಮಳೆಗಾಲದ ಹಸಿರಿನ ಮಡಿಲಲ್ಲಿ ಪ್ರಕೃತಿಯ ಸೌಂದರ್ಯ ಹಾಗೂ ಸುತ್ತಮುತ್ತಲಿನ ಪುಣ್ಯಕ್ಷೇತ್ರಗಳನ್ನು ಕಣ್ಣುಂಬಿಕೊಳ್ಳಲು ಬಯಸುವ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
