Holehonnur News / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಹೊಳೆಹೊನ್ನೂರು ಹೋಬಳಿಯಲ್ಲಿ ಕಳೆದ ಭಾನುವಾರದ ರಾತ್ರಿ ನಡೆದ ಘಟನೆಯೊಂದರ ಬಗ್ಗೆ ನಿನ್ನೆದಿನ ಸಂಜೆ ಮಾಹಿತಿ ಲಭ್ಯವಾಗಿದೆ.
ಮಲೆನಾಡು ಟುಡೆಗೆ ಲಭ್ಯವಾದ ಸ್ಥಳೀಯ ಮಾಹಿತಿ ಪ್ರಕಾರ, ಆಕಸ್ಮಾತ್ ಆಗಿ ಶುರುವಾರ ಕೌಟುಂಬಿಕ ಕಲಹದಲ್ಲಿ ಮಗನೊಬ್ಬ ತಂದೆಯ ಹತ್ಯೆಗೆ ಕಾರಣವಾಗಿದ್ದಾನೆ. ಅರಸನಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಗನಾಯ್ಕ (55) ಕೊಲೆಯಾದವ.
ಶಿವಗನಾಯ್ಕ 2 ವರ್ಷದ ಹಿಂದೆ ಹೊಸ ಮನೆ ಕಟ್ಟಿಸಿ ತನ್ನ ಇಬ್ಬರೂ ಮಕ್ಕಳು, ಸೊಸೆಯಂದಿರು ಮತ್ತು ಪತ್ನಿಯೊಂದಿಗೆ ವಾಸವಿದ್ದ. ಮನೆ ಕಟ್ಟಲು ಹಾಗೂ ಇಬ್ಬರು ಮಕ್ಕಳ ಮದುವೆಗೆ ತುಂಬಾ ಸಾಲ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಹೆಂಡತಿ ಮಕ್ಕಳ ಜೊತೆಗೆ ಜಗಳವಾಡುತ್ತಿದ್ದ ಎಂಬುದು ಹಿನ್ನೆಲೆ.
ಈ ಮಧ್ಯೆ ಮೃತ ಶಿವಗನಾಯ್ಕ ಮಕ್ಕಳನ್ನ ಹಾಗೂ ಪತ್ನಿಯನ್ನ ಹೊಸಮನೆಯಿಂದ ಹೊರಕ್ಕೆ ಹಾಕಿ ಕ್ಯಾತೆ ತೆಗೆದಿದ್ದನಂತೆ. ಅಲ್ಲದೆ ಕಳೆದ ಭಾನುವಾರ ಇದೇ ವಿಚಾರದಲ್ಲಿ ಹಳೆಯ ಮನೆಗೆ ಬಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ಈ ವೇಳೇ ಅಡ್ಡಬಂದ ಮಗ ಮಂಜುನಾಯ್ಕ ತಂದೆಯನ್ನ ಕುತ್ತಿಗೆಗೆ ಕೈ ಹಾಕಿ ಬಿಗಿಹಿಡಿದು ಆತನನ್ನು ತಡೆದಿದ್ದಾನೆ. ಆದರೆ, ಕುತ್ತಿಗೆ ಬಿಗಿ ಹಿಡಿದ್ದಿದ್ದರಿಂದ ಶಿವಗನಾಯ್ಕ್ ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಘಟನೆಯ ಬಗ್ಗೆ ಪೂರ್ಣ ಉಲ್ಲೇಖದೊಂದಿಗೆ ಹೊಳೆ ಹೊನ್ನೂರು ಪೊಲೀಸ್ ಸ್ಟೇಷನ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು ಬಿಎನ್ಎಸ್ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಂಜನಾಥ ನಾಯ್ಕ್ನ್ನ ಬಂಧನ ಪ್ರಕ್ರಿಯೆಯನ್ನು ಸಹ ಮುಗಿಸಿದ್ದಾರೆ.
