ಶಿವಮೊಗ್ಗ: ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ನೋಡಿ ಸಿಹಿಸುದ್ದಿ

Free Police Job Training ಶಿವಮೊಗ್ಗ: ನಗರದ ಸರ್ಜಿ ಫೌಂಡೇಶನ್ ಮತ್ತು ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಪೊಲೀಸ್ ಹುದ್ದೆಗಳಿಗೆ ಸೇರಬಯಸುವ ಆಕಾಂಕ್ಷಿಗಳಿಗೆ ಜುಲೈ 01 ರಂದು ಉಚಿತ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗದಲ್ಲಿ ನಡೆದ ಎಲ್ಲಾ ಟಾಪ್​ ಸುದ್ದಿಗಳು ಇ-ಪೇಪರ್​​ನಲ್ಲಿ

ಇಂದು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಶಾಸಕ ಡಾ. ಧನಂಜಯ ಸರ್ಜಿ, ಈ ಎರಡು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಸ್ಪರ್ಧಾಕಾಂಕ್ಷಿಗಳಿಗೆ ಜುಲೈ 01 ರ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಒಂದು ದಿನದ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದರು.

ಈ ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪ ಡುಂಡಿಗೆರೆ ಮತ್ತು ನಾಗರಾಜ್ ರೆಡ್ಡಿ ಅವರು ಭಾಗವಹಿಸಿ, ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ವಿಶ್ಲೇಷಣೆ, ದೈಹಿಕ ಪರೀಕ್ಷೆಯ ವಿಧಾನಗಳು, ಪಠ್ಯಕ್ರಮ, ಪರೀಕ್ಷೆ ಎದುರಿಸಲು ಸರಳ ತಂತ್ರಗಳು, ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

Free Police Job Training ಕಾಯಕಸೇತು ಪರೀಕ್ಷಾಪಥ ಉಚಿತ ಆನ್‌ಲೈನ್ ತರಬೇತಿ

ಕಾರ್ಯಾಗಾರದ ನಂತರ ಕಾಯಕಸೇತು ಪರೀಕ್ಷಾಪಥ ಎಂಬ ಶೀರ್ಷಿಕೆಯಡಿ ’30 ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ’ ಕಾರ್ಯಕ್ರಮವನ್ನು ಲೋಕಾರ್ಪಣೆ ಮಾಡಲಾಗುವುದು. ಈ ತರಬೇತಿಯು ಮುಂಬರುವ ದಿನಾಂಕ 29.06.2026 ಸೋಮವಾರದಿಂದ ಪ್ರಾರಂಭವಾಗಲಿದ್ದು, ಪ್ರತಿದಿನ ಬೆಳಿಗ್ಗೆ 2 ಗಂಟೆ ಮತ್ತು ಸಂಜೆ 2 ಗಂಟೆಗಳ ಕಾಲ ನುರಿತ ಉಪನ್ಯಾಸಕರಿಂದ ಬೋಧನೆ ನೀಡಲಾಗುವುದು.

ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಮತ್ತು ಸಮಯ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸಲು ಪ್ರತಿದಿನ ಮತ್ತು ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುತ್ತದೆ. ಅಲ್ಲದೆ, ಭಾಗವಹಿಸುವ ಅಭ್ಯರ್ಥಿಗಳಿಗೆ ಡಿಜಿಟಲ್ ರೂಪದಲ್ಲಿ ಸಮಗ್ರ ಸ್ಟಡಿ ಮೆಟೀರಿಯಲ್’ (ಕ್ಲಾಸ್ ನೋಟ್ಸ್) ಅನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಬಡ ಮತ್ತು ಮಧ್ಯಮ ವರ್ಗದ ಗ್ರಾಮೀಣ ಅಭ್ಯರ್ಥಿಗಳಿಗೆ ದುಬಾರಿ ಶುಲ್ಕ ನೀಡಿ ತರಬೇತಿ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದ ಮತ್ತು ಸರಿಯಾದ ಮಾರ್ಗದರ್ಶನದ ಕೊರತೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು 30 ದಿನಗಳ ಆನ್‌ಲೈನ್ ತರಬೇತಿಗೆ ಕೇವಲ 1,000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Free Police Job Training ನೋಂದಣಿ ಕಡ್ಡಾಯ

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕಾಯಕ ಸೇತು ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿಸಿಕೊಂಡ ಅರ್ಹ ಪದವೀಧರ ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಪರಿಗಣಿಸಲಾಗುವುದು. ಮಲೆನಾಡು ಭಾಗದ ವಿದ್ಯಾವಂತ ಯುವಜನತೆ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಧನಂಜಯ ಸರ್ಜಿ ಮತ್ತು ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ ಗಿರಿಮಾಜಿ ತಿಳಿಸಿದ್ದಾರೆ.

ಜೂನ್ 8 ರಿಂದ 13 ರವರೆಗೆ ನಡೆದ ಕಾಯಕಸೇತು ಉದ್ಯೋಗ ಸಂದರ್ಶನದಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದು, 404 ಅಭ್ಯರ್ಥಿಗಳು ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದಿದ್ದಾರೆ. ಕಳೆದ 8 ತಿಂಗಳ ಅಲ್ಪ ಅವಧಿಯಲ್ಲಿ ಕಾಯಕಸೇತು ಜಾಬ್ ಪೋರ್ಟಲ್ 544 ಯುವಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ. ಧನಂಜಯ ಸರ್ಜಿ, ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ ಗಿರಿಮಾಜಿ, ಕಾರ್ಯಕ್ರಮ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ, ಮತ್ತು ಪೂರ್ವ ವಲಯ ಅಧಿಕಾರಿ ಜೆ.ಸಿ ಕಿರಣ್ ಕುಮ‌ರ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ : 7812926702 ಈ ನಂಬರ್​ನ್ನು ಸಂಪರ್ಕಿಸಿ.

Free Police Job Training in Shivamogga