KS Eshwarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಮ್ಮನ್ನು ಮರಳಿ ಬಿಜೆಪಿಗೆ ಸೇರಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯಲ್ಲಿರುವ ಗೊಂದಲಗಳು ಸರಿಯಾದರೆ ಸೇರ್ಪಡೆಯಾಗುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನನ್ನ ಮಾತೃಪಕ್ಷವಾಗಿದೆ. ಆದರೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನಾನು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇನೆ. ಅವು ಷರತ್ತುಗಳಲ್ಲ, ಬಿಜೆಪಿಗೆ ಸೇರ್ಪಡೆಯಾಗಲು ಯಾವುದೇ ಷರತ್ತು ವಿಧಿಸುವುದಿಲ್ಲ. ಅಲ್ಲಿ ಕೆಲವು ಬದಲಾವಣೆಗಳು ಆಗಬೇಕಾಗಿದೆ. ಪಕ್ಷದ ದೃಷ್ಟಿಯಿಂದ ಅದು ಒಳ್ಳೆಯದು. ಈ ಕುರಿತು ಮುಖಂಡರ ಜೊತೆ ಮಾತನಾಡಿರುವುದಾಗಿ ಅವರು ತಿಳಿಸಿದರು.
ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಹಾಗೂ ರೈತರ ನಿರ್ಲಕ್ಷ್ಯ
ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿಯನ್ನು ತೀವ್ರವಾಗಿ ಟೀಕಿಸಿದ ಈಶ್ವರಪ್ಪ, “ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದರು. ಇಂದು ಅದೇ ಕಾಂಗ್ರೆಸ್ ಪಕ್ಷದವರು ಶಿವಕುಮಾರ್ ವಿರುದ್ಧ ಮಾತನಾಡುತ್ತಿದ್ದಾರೆ. ತಮಗೆ ಮಾತು ಕೊಟ್ಟು ವಂಚಿಸಿದರು ಎಂದು ಆರೋಪಿಸುತ್ತಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧವೇ ಅನೇಕರು ಬಹಿರಂಗವಾಗಿ ಮಾತನಾಡುವಂತಾಗಿದೆ” ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಅರ್ಧ ಮಳೆಗಾಲ ಮತ್ತು ಅರ್ಧ ಬರಗಾಲವಿದ್ದರೂ, ರೈತರ ಗೋಳನ್ನು ಕೇಳುವವರಿಲ್ಲದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇಂತಹ ದುಸ್ಥಿತಿ ಯಾವತ್ತೂ ಬಂದಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗುತ್ತಿರುವುದು ಅಭಿವೃದ್ಧಿ ಬಗ್ಗೆ ಚರ್ಚಿಸಲಲ್ಲ, ಬದಲಾಗಿ ಖಾತೆ ಹಂಚಿಕೆಯನ್ನು ಫೈನಲ್ ಮಾಡಲು ಎಂದು ದೂರಿದರು. ಅಧಿಕಾರ ಸಿಗದೆ ಶಾಸಕರು, ಕಷ್ಟ ಕೇಳುವವರಿಲ್ಲದೆ ರೈತರು ಹಾಗೂ ಸ್ವರ್ಗದಲ್ಲಿರುವ ಕಾಂಗ್ರೆಸ್‌ನ ಹಿರಿಯ ನಾಯಕರು ಇಂದು ಅಳುತ್ತಿದ್ದಾರೆ, ಎಂದು ಮಾರ್ಮಿಕವಾಗಿ ನುಡಿದರು.
ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರಿಂದ ರಾಜೀನಾಮೆ ಪಡೆದಿರುವ ಮೂಲಕ ಕಾಂಗ್ರೆಸ್ ಸಾಂವಿಧಾನಿಕ ಹುದ್ದೆಯ ಗೌರವವನ್ನು ಕಳೆದಿದೆ. ನಂಜಯ್ಯನಮಠ ಮತ್ತು ತಿಮ್ಮಾಪುರ ಅವರ ನಡುವಿನ ಆಡಿಯೋ ಸಂಭಾಷಣೆಯು ಆ ಪಕ್ಷದ ನೈಜ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್ ಮತ್ತೊಮ್ಮೆ ಬೆತ್ತಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಒಬ್ಬರೇ ಸರ್ಕಾರ ನಡೆಸಿದರೂ, ಅಧಿಕಾರದ ದಾಹಕ್ಕೆ ಶಾಸಕರು ಈ ರೀತಿ ವರ್ತಿಸಿರಲಿಲ್ಲ ಎಂಬುದನ್ನು ನೆನಪಿಸಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮ: ವ್ಯವಸ್ಥಿತ ಡಿಲೀಟ್ ಕಾರ್ಯಾಚರಣೆ
ಶಿವಮೊಗ್ಗ ನಗರದಲ್ಲಿ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದರು. “ಒಂದು ಬೂತ್ (ವಾರ್ಡ್ ನಂಬರ್ 8) ನಲ್ಲಿ 200 ಮತಗಳು ಡಿಲೀಟ್ ಆಗಿವೆ. ಟಿಪ್ಪು ನಗರದ ಭಾಗದಲ್ಲಿ ಒಂದೇ ಬೂತ್‌ನಲ್ಲಿ 350ಕ್ಕೂ ಹೆಚ್ಚು ಮತಗಳನ್ನು ಕೈಬಿಡಲಾಗಿದೆ. ಶ್ರೀಕಾಂತ್ ಅವರ ಬಡಾವಣೆಯಲ್ಲೂ 200ಕ್ಕೂ ಹೆಚ್ಚು ಮತಗಳು ನಾಪತ್ತೆಯಾಗಿವೆ. ಇದು ಯಾವ ಜಾತಿ ಅಥವಾ ಧರ್ಮದ ಮತಗಳೆಂದು ಗೊತ್ತಿಲ್ಲ, ಆದರೆ ವ್ಯವಸ್ಥಿತವಾಗಿ ಡಿಲೀಟ್ ಮಾಡಲಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಈ ಲೋಪವನ್ನು ಸರಿಪಡಿಸಲು ‘ರಾಷ್ಟ್ರಭಕ್ತ ಬಳಗ’ದ ಕಾರ್ಯಕರ್ತರು ಬಿಎಲ್‌ಒ (BLO) ಗಳ ಜೊತೆಗೂಡಿ ನಗರದ 288 ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು, ಹೆಸರು ಇಲ್ಲದಿದ್ದರೆ ತಕ್ಷಣವೇ ಅಗತ್ಯ ನಮೂನೆಯನ್ನು ತುಂಬಿ ಸೇರ್ಪಡೆಗೊಳಿಸುವಂತೆ ಅವರು ಮನವಿ ಮಾಡಿದರು.
ಯತೀಂದ್ರ ಇನ್ನೂ ಬಚ್ಚಾ: ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರ
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಯತೀಂದ್ರ ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ತಮ್ಮ ತಂದೆ ಸಿದ್ದರಾಮಯ್ಯನವರ ಮಟ್ಟಕ್ಕೆ ಬೆಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಯತೀಂದ್ರ ರಾಜಕೀಯದಲ್ಲಿ ಇನ್ನೂ ಬಚ್ಚಾ. ಹಿಂದೂ ಧರ್ಮದ ಬಗ್ಗೆ ಕನಿಷ್ಠ ಜ್ಞಾನವಿಲ್ಲದವರು ಏನೇನೋ ಮಾತನಾಡಿದರೆ ದೊಡ್ಡವರಾಗುವುದಿಲ್ಲ,” ಎಂದು ವಾಗ್ದಾಳಿ ನಡೆಸಿದರು.
ಈ ದೇಶ ನಿಂತಿರುವುದೇ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲೆ. ಇತಿಹಾಸದಲ್ಲಿ ಮೊಹಮ್ಮದ್ ಘಜ್ನಿ, ಘೋರಿಯಂತಹ ದಾಳಿಕೋರರು ಹಾಗೂ ಕ್ರಿಶ್ಚಿಯನ್ ಮಿಷನರಿಗಳು ಬಂದು ಮತಾಂತರ ಮಾಡಿದರೂ ಈ ದೇಶದ ಮೂಲ ಸಂಸ್ಕೃತಿಯನ್ನು ಅಳಿಸಲು ಸಾಧ್ಯವಾಗಲಿಲ್ಲ. ಜಗತ್ತಿಗೆ ಶಾಂತಿ ಸಾರುವ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಉದ್ಗ್ರಂಥಗಳಿರುವ ಈ ದೇಶ ಯಾವತ್ತೂ ಮುಸ್ಲಿಂ ರಾಷ್ಟ್ರವಾಗಲು ಸಾಧ್ಯವೇ ಇಲ್ಲ. ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ,” ಎಂದು ಈಶ್ವರಪ್ಪ ಕಡ್ಡಿಮುರಿದಂತೆ ಸ್ಪಷ್ಟಪಡಿಸಿದರು.
