ಭದ್ರಾವತಿಯ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 6,23,155 ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhadravathi ಘಟನೆಯ ವಿವರ ಹೀಗಿದೆ
ದೂರುದಾರರು ಟೆಲಿಗ್ರಾಂ ಆ್ಯಪ್ ಬಳಸುತ್ತಿದ್ದಾಗ ಅವರಿಗೆ ‘Fashion Designing’ ಉತ್ಪನ್ನಗಳಾದ ಪುರುಷರ ಮತ್ತು ಮಹಿಳೆಯರ ದಿನಬಳಕೆಯ ವಸ್ತುಗಳ ಮಾಹಿತಿ ಹಾಗೂ ಫೋಟೋಗಳು ಬಂದಿವೆ. ಅದರ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಒಂದು ವೆಬ್ ಪೇಜ್ ಓಪನ್ ಆಗಿದ್ದು, ಅದರಲ್ಲಿ ವ್ಯಕ್ತಿಯು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಸಬ್ಮಿಟ್ ಮಾಡಿದ್ದಾರೆ.
ತಕ್ಷಣವೇ ಇವರನ್ನು ‘TATA CLIQ FASHION’ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಲಾಗಿದೆ. ಆ ಗ್ರೂಪ್‌ನ ಅಡ್ಮಿನ್ ಒಬ್ಬ ತಾನು ಟಾಟಾ ಕ್ಲಿಕ್ ಕಂಪನಿಯ ಪ್ರತಿನಿಧಿಯಂತೆ ನಟಿಸಿ, ಕಂಪನಿಯ ಫ್ಯಾಷನ್ ಉತ್ಪನ್ನಗಳನ್ನು ಖರೀದಿಸಲು ಹಣ ಹೂಡಿಕೆ ಮಾಡುವಂತೆ ಸಂತ್ರಸ್ತನನ್ನು ನಂಬಿಸಿದ್ದಾನೆ ಕಂಪನಿಯು ನೀಡುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿದ್ದಾನೆ.
ಇದನ್ನು ನಂಬಿದ ದೂರುದಾರರು ಡಿಸೆಂಬರ್ 18 ರಿಂದ 25 ರ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 6,23,155 ರೂಪಾಯಿಗಳನ್ನು ವಂಚಕರು ನೀಡಿದ ಖಾತೆಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರ ವಂಚಕರು ಸಂಪರ್ಕಕ್ಕೆ ಸಿಗದೆ ಇದ್ದಾಗ ತಾವು ಮೋಸ ಹೋಗಿರುವುದು ದೂರುದಾರರಿಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
Bhadravathi Man Loses 6.23 Lakhs in Telegram Scam
