ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ವಿವಿಧ ಪರಿಸರ ಸಂಘಟನೆಗಳ ಪ್ರಮುಖರು ಹಾಗೂ ಹೋರಾಟಗಾರರ ನಿಯೋಗ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಲಿದೆ. ಡಿ. 16ರಿಂದ 20ರ ಒಳಗೆ ಭೇಟಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ ಎಂದು ಬಂಗಾರಮಕ್ಕಿ ಮಾರುತಿ ಗುರೂಜಿ ತಿಳಿಸಿದರು.
ಬಂಗಾರಮಕ್ಕಿ ಮಾರುತಿ ಗುರೂಜಿ ಸುದ್ದಿಗೋಷ್ಟಿ
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರ ಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಾಸ್ ವರದಿಯಲ್ಲಿ ಸ್ವತಂತ್ರ ಪರಿಸರ ಅಧ್ಯಯನ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಪಿಸಿ ನೀಡಿದ ಮಾಹಿತಿಯನ್ನೇ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. ವರದಿಯ 14 ಮತ್ತು 15ನೇ ಪುಟಗಳಲ್ಲಿ ಪರಿಸರ, ಪ್ರಕೃತಿ ಹಾಗೂ ಭೂಮಿಯ ಸ್ವರೂಪದ ಕುರಿತು ಸಮರ್ಪಕ ಅಧ್ಯಯನ ನಡೆದಿಲ್ಲ ಎಂಬ ಅಂಶಗಳಿವೆ ಎಂದು ಬಂಗಾರಮಕ್ಕಿ ಮಾರುತಿ ಗುರೂಜಿ ಆರೋಪಿಸಿದರು.
ಇಡೀ ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯದ ಸಮಗ್ರ ಅಧ್ಯಯನವಿಲ್ಲದೆ ಬೃಹತ್ ಯೋಜನೆ ಕೈಗೆತ್ತಿಕೊಳ್ಳುವುದು ಖಂಡನೀಯ. ಶರಾವತಿ ನದಿಯಲ್ಲಿ ಈಗಾಗಲೇ ಏಳು ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ಎಂಟನೇ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ವಿದ್ಯುತ್ ಅವಶ್ಯಕತೆಯನ್ನು ಒಪ್ಪುತ್ತೇವೆ. ಆದರೆ ಪರಿಸರಕ್ಕೆ ಹಾನಿಯಾಗದ ಪರ್ಯಾಯ ವ್ಯವಸ್ಥೆಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದರು.
ಯೋಜನೆಗೆ ಈಗಾಗಲೇ ₹376 ಕೋಟಿ ವೆಚ್ಚ ಮಾಡಲಾಗಿದೆ. ಹಣಕಾಸಿನ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳಿದ್ದು, ವಿದೇಶಿ ಸಾಲ ಪಡೆದು ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾಪವಿದೆ. ಇಂತಹ ಸಂದರ್ಭದಲ್ಲಿ ಯೋಜನೆಯ ಔಚಿತ್ಯವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಈ ಹೋರಾಟದಲ್ಲಿ ಪರಿಸರ ಸಂಘಟನೆ, ರೈತ ಸಂಘ, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾಷ್ಟ್ರಪತಿಗಳ ಭೇಟಿಗೂ ಪ್ರಯತ್ನ ನಡೆದಿದೆ. ಸ್ಥಳೀಯ ಶಾಸಕರು, ಸಂಸದರು ಸಹಕರಿಸಬೇಕು. ಪ್ರಕೃತಿ ಮತ್ತು ಜನಜೀವನದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಬಂಗಾರಮಕ್ಕಿ ಮಾರುತಿ ಗುರೂಜಿ ಕರೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಕವಿತಾ, ಪ್ರಕಾಶ್, ಮಹದೇವಸ್ವಾಮಿ, ಜನಾರ್ಧನ ಪೈ, ಅಶೋಕ್ ಕುಮಾರ್ ಗಾಂಧಿ, ಸುಬ್ರಮಣ್ಯ, ಹರೀಶ್ ಕಾರ್ನಿಕ್, ದಿಲೀಪ್ ನಾಡಿಗ್, ಎಂ. ಜಿ. ಭಟ್, ಬಿ. ರಾಜು ಇದ್ದರು.
₹376 ಕೋಟಿ ಮುಂಗಡ ಪಾವತಿ: ಜಾರ್ಜ್ ರಾಜೀನಾಮೆಗೆ ಆಗ್ರಹ
ಇನ್ನೂ ಇದೇ ವೇಳೆ ಮಾತನಾಡಿದ ಶ್ರೀಕಾಂತ್ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕಾಮಗಾರಿ ಆರಂಭಕ್ಕೂ ಮುನ್ನ ಗುತ್ತಿಗೆದಾರ ಮೇಘಾ ಇನ್‌ಫ್ರಾಸ್ಟ್ರಕ್ಚರ್ಸ್ (MEIL) ಸಂಸ್ಥೆಗೆ ₹376 ಕೋಟಿ ಮುಂಗಡ ಪಾವತಿಸಿರುವ ಪ್ರಕರಣದ ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹಣ ಪಾವತಿ ಕುರಿತು ಸಮಗ್ರ ತನಿಖೆ ನಡೆಸಿ, ಗುತ್ತಿಗೆದಾರ ಸಂಸ್ಥೆಯಿಂದ ಹಣ ವಾಪಸ್ ಪಡೆಯಬೇಕು. ಶರಾವತಿ ಪಿಎಸ್‌ಪಿ ಯೋಜನೆಗೆ ಸಂಬಂಧಿಸಿದಂತೆ ನಿಯಾಸ್ ಸಂಸ್ಥೆ ನೀಡಿರುವ ಪೂರಕ ವರದಿಯನ್ನು ದೇಶದ 20 ಪರಿಸರ ತಜ್ಞರ ತಂಡ ಕೂಲಂಕಷವಾಗಿ ಪರಿಶೀಲಿಸಿದೆ. ವರದಿಯಲ್ಲಿ ಪರಿಸರ ಸಂರಕ್ಷಣೆಯ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಎಚ್.ಎಸ್. ಸಿಂಗ್ ಸಮಿತಿಯ ವರದಿ, ಭೂಕುಸಿತದ ಅಪಾಯ, ಸ್ಫೋಟಕಗಳ ಬಳಕೆಯಿಂದ ಉಂಟಾಗಬಹುದಾದ ಪರಿಣಾಮ ಹಾಗೂ ವಿದ್ಯುತ್ ಸರಬರಾಜು ಮಾರ್ಗಕ್ಕಾಗಿ ಸುಮಾರು 1.25 ಲಕ್ಷ ಮರಗಳ ತೆರವಿನ ಅಂಶಗಳನ್ನು ನಿರ್ಲಕ್ಷಿಸಲಾಗಿದೆ ಎಂದು ತಜ್ಞರ ತಂಡ ಆಕ್ಷೇಪಿಸಿದೆ. ವರದಿಯನ್ನು ಅವೈಜ್ಞಾನಿಕ ಮತ್ತು ದೋಷಪೂರಿತ ಎಂದು ಪರಿಗಣಿಸಿ ಎನ್‌ಬಿಡಬ್ಲ್ಯುಎಲ್ ತಿರಸ್ಕರಿಸಬೇಕು ಎಂದು ತಂಡ ಒತ್ತಾಯಿಸಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬಂಗಾರಮಕ್ಕಿ ಮಾರುತಿ ಗುರೂಜಿ ನೇತೃತ್ವದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, 20 ಪರಿಸರ ತಜ್ಞರ ಆಕ್ಷೇಪಗಳನ್ನು ಸಲ್ಲಿಸಲಾಗುವುದು. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಇರುವ ಶರಾವತಿ ಪಿಎಸ್‌ಪಿ ಯೋಜನೆಗೆ ಅನುಮತಿ ನೀಡಬಾರದು ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯಕ್ಕೆ ಕಂಟಕ: ಬಿ. ಎಂ. ಕುಮಾರಸ್ವಾಮಿ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ವರಾಹಿ ಪ್ರದೇಶದ ನೈಸರ್ಗಿಕ ಅರಣ್ಯ ಹಾಗೂ ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಕ್ಕೆ ಅಪಾಯ ಎದುರಾಗಲಿದೆ ಎಂದು ಪರಿಸರವಾದಿ ಪ್ರೊ. ಬಿ. ಎಂ. ಕುಮಾರಸ್ವಾಮಿ ಎಚ್ಚರಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಮುಂದುವರಿದರೆ ಮಲೆನಾಡಿನಲ್ಲಿ ಮಾನವ–ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ. ನೈಸರ್ಗಿಕ ಅರಣ್ಯಗಳನ್ನು ನಾಶಪಡಿಸಿ ನೀಲಗಿರಿ, ಅಕೇಶಿಯಾ ನೆಡುತೋಪುಗಳನ್ನು ಬೆಳೆಸುತ್ತಿರುವುದರಿಂದ ವನ್ಯಜೀವಿಗಳ ಆಹಾರ ಮತ್ತು ಆವಾಸಸ್ಥಾನ ನಷ್ಟವಾಗುತ್ತಿದೆ. ಹೀಗಾಗಿ ಆನೆಗಳು, ಕರಡಿಗಳು ಗ್ರಾಮಗಳತ್ತ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
