ಭದ್ರಾ ನೀರಿಗಾಗಿ ರೈತರ ಅಹೋರಾತ್ರಿ ಹೋರಾಟ | ನಿನ್ನೆ ಶಿವಮೊಗ್ಗದಲ್ಲಿ ಏನೆಲ್ಲ ನಡೆಯಿತು?

ಹಂಚಿಕೊಳ್ಳಿ
WhatsApp Facebook X Telegram
Shivamogga Farmers Protest Tractor Rally, Road Blockades,
Shivamogga Farmers Protest Tractor Rally, Road Blockades,

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಭದ್ರಾ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಸತತ 20 ದಿನ ನೀರು ಹರಿಸುವಂತೆ ಆಗ್ರಹಿಸಿ ನಿನ್ನೆ ಬುಧವಾರ (ನವೆಂಬರ್ 25) ಶಿವಮೊಗ್ಗದಲ್ಲಿ ಆರಂಭಗೊಂಡ ರೈತರ ಪ್ರತಿಭಟನೆ ಸಂಜೆ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡಿತು. ಬೆಳಿಗ್ಗೆ ಟ್ರ್ಯಾಕ್ಟರ್‌ ರ‍್ಯಾಲಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ, ಪೊಲೀಸರೊಂದಿಗೆ ಮಾತಿನ ಚಕಮಕಿ, ನಗರದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ, ರಸ್ತೆ ವಿಭಜಕದ ಮೇಲೆ ಟ್ರ್ಯಾಕ್ಟರ್‌ ಚಲಾವಣೆ ಸೇರಿದಂತೆ ಹಲವು ಘಟನೆಗಳಿಗೆ ಶಿವಮೊಗ್ಗ ಸಾಕ್ಷಿಯಾಯಿತು. ಅಂತಿಮವಾಗಿ ನೀರು ಹರಿಸುವ ಕುರಿತು ಸರ್ಕಾರದಿಂದ ಸ್ಪಷ್ಟ ಆದೇಶ ಹೊರಬರುವವರೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರವನ್ನು ರೈತರು ಕೈಗೊಂಡರು.

ಭದ್ರಾ ನೀರಿಗಾಗಿ ಬೆಳಿಗ್ಗೆ 10 ಗಂಟೆಗೆ ಪುರಲೆಯಿಂದ ಆರಂಭಗೊಂಡ ಹೋರಾಟ

ಭದ್ರಾ ಅಚ್ಚುಕಟ್ಟು ಪ್ರದೇಶದ ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ರಕ್ಷಿಸಲು ನಾಲೆಗಳಲ್ಲಿ ಸತತ 20 ದಿನ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಭದ್ರಾ ಎಡ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಬೆಳಿಗ್ಗೆ 10 ಗಂಟೆಗೆ ಪುರಲೆ ಗ್ರಾಮದ ವೃತ್ತದಿಂದ ರೈತ ಸಂಘದ ಬಾವುಟಗಳೊಂದಿಗೆ ಆರಂಭಗೊಂಡ ಟ್ರ್ಯಾಕ್ಟರ್‌ ರ‍್ಯಾಲಿ ಚಿಕ್ಕಲ್, ಬಿ.ಎಚ್. ರಸ್ತೆ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ ಹಾಗೂ ಬಾಲರಾಜ್ ಅರಸ್ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.ರೈತ ಸಂಘದ ಹಿರಿಯ ನಾಯಕ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭದ್ರಾವತಿ, ಮಲೆಬೆನ್ನೂರು, ದಾವಣಗೆರೆ, ಚಿಕ್ಕಮಗಳೂರು ಹಾಗೂ ವಿಜಯಪುರ ಭಾಗದ ಸಾವಿರಾರು ರೈತರು ಟ್ರ್ಯಾಕ್ಟರ್‌ಗಳೊಂದಿಗೆ ಪಾಲ್ಗೊಂಡಿದ್ದರು.

ಪೊಲೀಸರ ತಡೆ ನಡುವೆಯೂ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಟ್ರ್ಯಾಕ್ಟರ್‌ಗಳು

ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದನ್ನು ತಡೆಯಲು ಪೊಲೀಸರು ಗೇಟ್ ಅಳವಡಿಸಿದ್ದರು. ಆದರೆ, ಪ್ರತಿಭಟನಾನಿರತ ರೈತರು ಗೇಟ್ ತಳ್ಳಿ ಒಳಪ್ರವೇಶಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ತಡೆಯ ನಡುವೆಯೂ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಟ್ರ್ಯಾಕ್ಟರ್‌ಗಳನ್ನು ತಂದರು.ಭದ್ರಾ ಜಲಾಶಯದಲ್ಲಿ ಸುಮಾರು 178 ಅಡಿ ನೀರು ಸಂಗ್ರಹವಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಗಳ ಮೂಲಕ ನೀರು ಹರಿಸದೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 4 ಟಿಎಂಸಿ ನೀರು ಹರಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ರೈತರು ಆರೋಪಿಸಿದರು.

ಸಚಿವರು, ಶಾಸಕರ ವಿರುದ್ಧ ರೈತರ ಘೋಷಣೆ

ರಾಜ್ಯ ಸರ್ಕಾರದ ನೀರಾವರಿ ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೈತರು ಡಿ.ಕೆ. ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಂತನಗೌಡ ವಿರುದ್ಧ ಘೋಷಣೆಗಳನ್ನು ಕೂಗಿದರು.ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ 10 ದಿನ ನೀರು ಹರಿಸುವುದಾಗಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ, 3 ದಿನಗಳಲ್ಲಿಯೇ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತ ತಲುಪಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಎರಡೂ ನಾಲೆಗಳಿಗೆ 20 ದಿನ ನೀರು ಹರಿಸಬೇಕು. ಜನವರಿಯಿಂದ ರೈತರ ಬೆಳೆಗಳಿಗೆ ನೀರು ಒದಗಿಸುವ ವೇಳಾಪಟ್ಟಿಯನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗಡುವು ನೀಡಿದ್ದ ಕೆ.ಟಿ. ಗಂಗಾಧರ್

  • ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕೆ.ಟಿ. ಗಂಗಾಧರ್, ಭದ್ರಾ ಜಲಾಶಯದ ಎರಡೂ ನಾಲೆಗಳಿಗೆ ನೀರು ಹರಿಸುವ ಕುರಿತು ಅರ್ಧ ಗಂಟೆಯೊಳಗೆ ಆದೇಶ ಹೊರಡಿಸದಿದ್ದರೆ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ ಎಂದು ಎಚ್ಚರಿಕೆ ನೀಡಿದ್ದರು.
  • ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿದ ಸರ್ಕಾರಗಳು ಈ ಹಿಂದೆಯೂ ಉಳಿದಿಲ್ಲ. ಮುಂದೆಯೂ ಉಳಿಯುವುದಿಲ್ಲ. ಭದ್ರಾ ಜಲಾಶಯದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ರಾಜಕಾರಣಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  • ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಈ ಹಿಂದೆ 10 ದಿನ ನೀರು ಹರಿಸುವುದಾಗಿ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಮುಂದುವರಿಸಬೇಕು. ತುಂಗ ಮೇಲ್ದಂಡೆಯಿಂದ ನೀರು ಹರಿಸುವ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
  • ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿರುವ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಅಧಿಕಾರಿಗಳು ಸರ್ಕಾರದೊಂದಿಗೆ ಮಾತುಕತೆ ನಡೆಸಲಿ, ನಾನು ರೈತರೊಂದಿಗೆ ಚರ್ಚಿಸುತ್ತೇನೆ ಎಂದು ಗಂಗಾಧರ್ ತಿಳಿಸಿದರು.
  • ನಾಲೆಗಳಿಗೆ ನೀರು ಹರಿಸುವುದರಿಂದ 4 ಜಿಲ್ಲೆಗಳ ರೈತರು ತಮ್ಮ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ನೀರಿನ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರದ ಆಧಾರದಲ್ಲಿಯೇ ಮುಂದಿನ ದಿನಗಳಲ್ಲಿ ರೈತರೂ ಸರ್ಕಾರದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
  • ಅಡಿಕೆ ಬೆಳೆಯ ಆದಾಯವನ್ನೇ ಅವಲಂಬಿಸಿ ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ವಿವಿಧ ಅಗತ್ಯಗಳಿಗೆ ಅಡಿಕೆ ಬೆಳೆ ಆಧಾರವಾಗಿದೆ. ಜಿಲ್ಲೆಯ ಆರ್ಥಿಕತೆಯಲ್ಲಿಯೂ ಅಡಿಕೆ ಪ್ರಮುಖ ಪಾತ್ರ ವಹಿಸಿದೆ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂತಹ ಸಮಾಜವಾದಿ ನಾಯಕರಿದ್ದ ಜಿಲ್ಲೆಯಲ್ಲಿ ರೈತರನ್ನು ಸರ್ಕಾರ ಈ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಸೆಂಬರ್ 4ರಂದು ಐಸಿಸಿ ಸಭೆ; ಅಲ್ಲಿಯವರೆಗೆ ಕಾಯಲು ರೈತರ ನಿರಾಕರಣೆ

  • ನೀರು ಹಂಚಿಕೆ, ಬೆಳೆ ಪದ್ಧತಿ ಹಾಗೂ ನೀರಿನ ಬಳಕೆಗೆ ಸಂಬಂಧಿಸಿದಂತೆ ಸಮಗ್ರ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ಸ್ಪಷ್ಟತೆಯ ಕೊರತೆಯಿಂದ ರೈತರಲ್ಲಿ ಗೊಂದಲ ಉಂಟಾಗಿದೆ ಎಂದು ಕೆ.ಟಿ. ಗಂಗಾಧರ್ ತಿಳಿಸಿದರು.
  • ಡಿಸೆಂಬರ್ 4ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಗೆ ರೈತರನ್ನು ಆಹ್ವಾನಿಸುವ ಭರವಸೆಯನ್ನೂ ನೀಡಲಾಗಿತ್ತು. ಈ ವಿಚಾರವನ್ನು ಮಹಾ ರೈತ ಕಿಸಾನ್ ಮಂಚ್ ಸಭೆಯಲ್ಲಿಯೂ ಚರ್ಚಿಸಲಾಗಿದೆ ಎಂದರು.
  • ಡಿಸೆಂಬರ್ 4ರಂದು ಸಭೆ ನಡೆಸುವುದಕ್ಕೆ ರೈತರ ಆಕ್ಷೇಪವಿಲ್ಲ. ಆದರೆ, ಅಲ್ಲಿಯವರೆಗೆ ಕಾಯುವುದರಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗುವ ಆತಂಕವಿದೆ. ಬೆಳೆಗಳು ಹಾಳಾದ ಬಳಿಕ ಸಭೆ ನಡೆಸಿ ನಿರ್ಧಾರ ಕೈಗೊಂಡರೆ ರೈತರಿಗೆ ಪ್ರಯೋಜನವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.
  • ಪ್ರಸ್ತುತ ಭದ್ರಾ ಎಡದಂಡೆ ನಾಲೆಗೆ 10 ದಿನಗಳ ಕಾಲ ನೀರು ಹರಿಸಲು ಆದೇಶಿಸಲಾಗಿದೆ. ಈ ಅವಧಿಯನ್ನು ಹೆಚ್ಚುವರಿಯಾಗಿ 10 ದಿನ ವಿಸ್ತರಿಸುವ ಮೂಲಕ ಒಟ್ಟು 20 ದಿನ ನೀರು ಹರಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.
  • ಬಲದಂಡೆ ನಾಲೆಗೆ ನೀರು ಹರಿಸುವ ಕುರಿತು ಈ ಹಿಂದೆ ಹೊರಡಿಸಲಾಗಿದ್ದ ಆದೇಶವನ್ನು ರಾಜಕೀಯ ಗೊಂದಲದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ ಗಂಗಾಧರ್, ಆ ಆದೇಶವನ್ನು ಮರುಜಾರಿಗೊಳಿಸಿ ತಕ್ಷಣವೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
  • ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಅವರು ರೈತರ ಬೇಡಿಕೆ, ಬೆಳೆಗಳ ಪರಿಸ್ಥಿತಿ ಹಾಗೂ ನೀರಿನ ತುರ್ತು ಅಗತ್ಯವನ್ನು ಸರ್ಕಾರಕ್ಕೆ ಪತ್ರದ ಮೂಲಕ ವಿವರಿಸಿದ್ದಾರೆ. ಸರ್ಕಾರದಿಂದ ಸಮಯಾವಕಾಶ ಕೇಳಲಾಗಿದೆಯಾದರೂ ನೀರು ಹರಿಸುವ ಕುರಿತು ನಿರ್ಧಾರವಾಗದೆ ರೈತರು ಮನೆಗೆ ಮರಳುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ಸಂಜೆ ವೇಳೆಗೆ ನಗರದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ

ಬೆಳಿಗ್ಗೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನೆ ಸಂಜೆ ವೇಳೆಗೆ ನಗರದ ವಿವಿಧ ಭಾಗಗಳಿಗೂ ವಿಸ್ತರಿಸಿತು. ಹೊಳೆ ಬಸ್​ಸ್ಟಾಪ್​, ಕೋರ್ಟ್ ವೃತ್ತ, ವೀರಭದ್ರ ಚಿತ್ರಮಂದಿರದ ಬಳಿಯ ಸಿಗ್ನಲ್ ಹಾಗೂ ಮಹಾವೀರ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರೈತರು ಪ್ರತಿಭಟನೆ ನಡೆಸಿದರು. ಮಹಾವೀರ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೋರ್ಟ್ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳನ್ನು ಚಲಾಯಿಸುತ್ತಾ ಪ್ರತಿಭಟನಾನಿರತ ರೈತರು ಸ್ವಾಭಿಮಾನಿ ಶಿವಮೊಗ್ಗ ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಬಿ. ನಿಖಿಲ್

ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಎಸ್ಪಿ ಅವರ ಮನವಿಗೆ ಸ್ಪಂದಿಸಿದ ರೈತರು ಕೋರ್ಟ್ ವೃತ್ತದಲ್ಲಿದ್ದ ಟ್ರ್ಯಾಕ್ಟರ್‌ಗಳನ್ನು ತೆರವುಗೊಳಿಸಿದರು. ವೀರಭದ್ರ ಚಿತ್ರಮಂದಿರದ ಬಳಿಯ ಸಿಗ್ನಲ್‌ನಲ್ಲಿದ್ದ ಟ್ರ್ಯಾಕ್ಟರ್‌ಗಳನ್ನೂ ತೆರವುಗೊಳಿಸಲಾಯಿತು. ಅಲ್ಲಿದ್ದ ರೈತರು ಮರಳಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ಆದರೆ, ಬೆಕ್ಕಿನಕಲ್ಮಠ ಹಾಗೂ ಚರ್ಚ್ ವೃತ್ತದಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ತಡೆಯನ್ನೂ ರೈತರು ಮುಂದುವರಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ, ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ರೈತರು ಪತ್ರ ವ್ಯವಹಾರ ಬೇಡ, ತಕ್ಷಣವೇ ನಾಲೆಗಳಿಗೆ ನೀರು ಹರಿಸುವ ಆದೇಶ ಬೇಕು ಎಂದು ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೋರಾಟವನ್ನು ಮುಂದುವರಿಸಿದರು.

ಡಿವೈಡರ್ ಮೇಲೆ ಚಲಿಸಿದ ಟ್ರ್ಯಾಕ್ಟರ್‌, ಮುರಿದುಬಿದ್ದ ಕಬ್ಬಿಣದ ರಾಡ್‌ಗಳು

ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ವಿಭಜಕದ ಮೇಲೆ ರೈತರೊಬ್ಬರು ಟ್ರ್ಯಾಕ್ಟರ್‌ ಚಲಾಯಿಸಿ ರಸ್ತೆ ದಾಟಿಸಿದರು. ಈ ವೇಳೆ ರಸ್ತೆ ವಿಭಜಕದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್‌ಗಳು ಮುರಿದು ಬಿದ್ದವು. ನವೆಂಬರ್ 25ರಂದೇ ಭದ್ರಾ ನಾಲೆಗಳಿಗೆ ನೀರು ಹರಿಸುವ ಕುರಿತು ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ನವೆಂಬರ್ 26ರಂದು ಶಿವಮೊಗ್ಗ ನಗರ ಬಂದ್ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಸರ್ಕಾರ ತನ್ನ ಹಿಂದಿನ ಆದೇಶವನ್ನು ಮರುಪರಿಶೀಲಿಸಿ ನಾಲೆಗಳಿಗೆ ನೀರು ಹರಿಸುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ನೀರು ಹರಿಸುವ ಕುರಿತು ಸ್ಪಷ್ಟ ಆದೇಶ ದೊರೆಯದೆ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಕೆ.ಟಿ. ಗಂಗಾಧರ್ ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor